ದೇಶ

ನಮ್ಮ ಜಗಳ ಸರ್ಕಾರದೊಳಗೇ ಹೊರತು ಕುಟುಂಬದೊಳಗಲ್ಲ: ಮೌನ ಮುರಿದ ಅಖಿಲೇಶ್

Manjula VN

ಲಖನೌ: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಆಂತರಿಕ ಯುದ್ಧವಾಗುತ್ತಿರುವ ಕುರಿತಂತೆ ಕೊನೆಗೂ ಮೌನ ಮುರಿದಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ನಮ್ಮ ಜಗಳ ಸರ್ಕಾರದೊಳಗೇ ವಿನಃ ಕುಟುಂಬದ ಒಳಗಲ್ಲ ಎಂದು ಬುಧವಾರ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕ ಶಿವಪಾಲ್ ಯಾದವ್ ಹಾಗೂ ಅಖಿಲೇಶ್ ಯಾದವ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಇಬ್ಬರ ನಡುವಿನ ಆಂತರಿಕ ಯುದ್ಧ ಇದೀಗ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕುಟುಂಬದ ಜಗಳವೆಲ್ಲಿ ಕಂಡು ಬಂತು? ನಮ್ಮ ಜಗಳವೇನಿದ್ದರೂ ಸರ್ಕಾರದೊಳಗೇ ಆಗಿದ್ದು, ಇದು ಕುಟುಂಬದೊಳಗಿನ ಜಗಳವಲ್ಲ. ಕುಟುಂಬಸ್ಥರು ಮಧ್ಯಸ್ಥಿಕೆ ವಹಿಸಿದರೆ ಸರ್ಕಾರ ಕಾರ್ಯ ನಿರ್ವಹಿಸುವುದು ಹೇಗೆ? ಸರ್ಕಾರದ ಕೆಲ ಕೆಲಸಗಳು ಹಾಗೂ ನಿರ್ಧಾರಗಳನ್ನು ನೇತಾಜಿ (ಮುಲಾಯಂ ಸಿಂಗ್) ಅವರ ಸಲಹೆ ಮೇರೆಗೆ ಕೈಗೊಳ್ಳಲಾಗುತ್ತಿದೆ. ಕೆಲಸ ತೀರ್ಮಾನಗಳನ್ನು ಸ್ವತಃ ನಾನೇ ತೆಗೆದುಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಮಾಜವಾದಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಕಿತ್ತುಹಾಕಿ ಈ ಸ್ಥಾನಕ್ಕೆ ಶಿವಪಾಲ್ ಯಾದವ್ ಅವರನ್ನು ನೇಮಿಸಲಾಗಿತ್ತು. ನಂತರ ಶಿವಪಾಲ್ ಯಾದವ್ ಬಳಿಯಿದ್ದ ಬಹುಮುಖ್ಯ ಖಾತೆಗಳಿಗೆ ಅಖಿಲೇಶ್ ಅವರು ಕತ್ತರಿ ಪ್ರಯೋಗ ಮಾಡಿದ್ದರು. ಈ ಬೆಳವಣಿಗೆಯು ಯಾದವ್ ಕುಟುಂಬದಲ್ಲಿ ಭಿನ್ನಮತ ಸ್ಫೋಟಗೊಳ್ಳುವಂತೆ ಮಾಡಿದೆ ಎಂದು ಹೇಳಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಶಿವಪಾಲ್ ಯಾದವ್ ಅವರು, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ನಂತರ ಪ್ರತಿಕ್ರಿಯೆ ನೀಡಿದ್ದ ಅವರು, ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಗೌರವಿಸಿ, ಜವಾಬ್ದಾರಿಯುತವಾಗಿ ಪಾಲನೆ ಮಾಡುತ್ತೇನೆ. ಪಕ್ಷದ ನಿರ್ಧಾರವನ್ನು ಪಾಲಿಸುತ್ತೇನೆಂದು ಹೇಳಿದ್ದರು.

ಅಖಿಲೇಶ್ ಅವರ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿ, ತಮ್ಮ ಸಂಪುಟದಲ್ಲಿ ಯಾವ ಯಾವ ಸಚಿವರು ಬೇಕು ಮತ್ತು ಅವರ ಆಯ್ಕೆ ವಿಚಾರ ಮುಖ್ಯಮಂತ್ರಿಗಳ ಜವಾಬ್ದಾರಿಯಾಗಿರುತ್ತದೆ. ಇದನ್ನೇ ಉತ್ತರ ಪ್ರದೇಶ ಮುಖ್ಯಮಂತ್ರಿಗಳೂ ಸಹ ಮಾಡಿದ್ದಾರೆಂದು ತಿಳಿಸಿದ್ದರು.

SCROLL FOR NEXT