ನವದೆಹಲಿ: ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ನೀಡಲಾಗುತ್ತಿರುವ ಕೇಂದ್ರದ ಅನುದಾನ ಮತ್ತು ಭದ್ರತೆಯನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಹುರಿಯತ್ ನಾಯಕರನ್ನು ಪ್ರತ್ಯೇಕವಾದಿಗಳು ಎಂದು ಕರೆದ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ಸುಪ್ರೀ ಪೀಠ, ಭದ್ರತೆ ಮತ್ತು ಇತರ ಕಾರಣಗಳಿಗೆ ಅನುದಾನ ನೀಡುವ ವಿಷಯ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು' ಎಂದು ಹೇಳಿದೆ. ಅಲ್ಲದೆ ತನ್ನ ಆದೇಶದಲ್ಲಿ ಪ್ರತ್ಯೇತವಾದಿಗಳು ಎಂಬ ಪದ ಬಳಸಲು ನಿರಾಕರಿಸಿದೆ.
'ಇದು ಅನುಭವಕ್ಕೆ ಸಂಬಂಧಿಸಿದ ವಿಷಯ. ಸರ್ಕಾರ ಅವರನ್ನು ಪ್ರತ್ಯೇಕವಾದಿಗಳು ಎಂದು ಘೋಷಿಸಿದೆಯಾ? ನೀವು ಒಬ್ಬ ವ್ಯಕ್ತಿಯನ್ನು ಹೇಗೆ ಬೇಕಾದರೂ ಕರೆದುಕೊಳ್ಳಬಹುದು. ಆದರೆ ಅದೇ ಪದವನ್ನು ಕೋರ್ಟ್ ನಲ್ಲಿ ಬಳಸಬಾರದು' ಎಂದು ಕೋರ್ಟ್ ಹೇಳಿದೆ.
ಪ್ರತ್ಯೇಕವಾದಿಗಳ ವಿದೇಶ ಪ್ರವಾಸ ಮತ್ತು ಭದ್ರತೆ ಹಾಗೂ ಇತರೆ ವೆಚ್ಚಗಳಿಗೆ ಸರ್ಕಾರ ಸುಮಾರು 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದು, ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಕೋರಿ ಸೆಪ್ಟೆಂಬರ್ 8ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.