ನವದೆಹಲಿ: ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ಚಿಕುನ್ ಗುನ್ಯಾ ರೋಗ ಎದುರಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನತೆ ಭಯಪಡುವ ಅಗತ್ಯವಿಲ್ಲ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಬುಧವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಚಿಕುನ್ ಗುನ್ಯಾ ರೋಗದಿಂದ ಈವರೆಗೂ ಸಾವಿನ ಕುರಿತು ಯಾವುದೇ ವರದಿಗಳಾಗಿಲ್ಲ. ಒಬ್ಬ ವ್ಯಕ್ತಿ ಚಿಕುನ್ ಗುನ್ಯಾದಿಂದ ಬಳಲುತ್ತಿದ್ದರೆ, ಅದರ ಪರಿಣಾಮ 6 ತಿಂಗಳವರೆಗೂ ಇರುತ್ತದೆ. ದೆಹಲಿಯಲ್ಲಿ ಚಿಕುನ್ ಗುನ್ಯಾ ಸಮಸ್ಯೆಯಿಂದ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆಂದು ಹೇಳಲಾಗುತ್ತಿದೆ. ಕೇವಲ ಒಂದು ಆಸ್ಪತ್ರೆಯಲ್ಲಿ ಚಿಕುನ್ ಗುನ್ಯಾ ರೋಗದಿಂದ ಹೆಚ್ಚು ಜನರು ಸಾವನ್ನಪ್ಪುತ್ತಿರುವುದಾಗಿ ವರದಿಗಳು ತಿಳಿದುಬಂದಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.
ರೋಗದ ಬಗ್ಗೆ ಜನರು ಭಯ ಪಡುವ ಅಗತ್ಯವಿಲ್ಲ. ಚಿಕುನ್ ಗುನ್ಯಾ ಎದುರಿಸಲು ಸರ್ಕಾರ ಈಗಾಗಲೇ ಎಲ್ಲಾ ರೀತಿಯ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯರು ಸಲಹೆ ನೀಡುತ್ತಿದ್ದಂತೆ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ದೆಹಲಿಯ ಸಿರ್ ಗಂಗಾ ರಾಮ್ ಆಸ್ಪತ್ರೆಯೊಂದರಲ್ಲಿ ಕೇವಲ ಎರಡು ದಿನಗಳಲ್ಲಿ 4 ಜನ ವಯೋವೃದ್ಧರು ಚಿಕುನ್ ಗುನ್ಯಾದಿಂದ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿದ್ದವು.