ದೇಶ

ಸಂಸದೀಯ ಸಭೆಯೆಲ್ಲಾ ಗಾಸಿಪ್ ಅಷ್ಟೇ, ಪಕ್ಷದಲ್ಲಿ ಯಾವುದೇ ಬಿಕ್ಕಟ್ಟಿಲ್ಲ: ರಾಮ್ ಗೋಪಾಲ್ ಯಾದವ್

Manjula VN

ಲಖನೌ: ಸಮಾಜವಾದಿ ಪಕ್ಷದಲ್ಲಿ ಯಾವುದೇ ರೀತಿಯ ಸಂಕಟಗಳಿಲ್ಲ. ಕೆಲ ಸಣ್ಣಪುಟ್ಟ ಸಮಸ್ಯೆಗಳಿದ್ದು, ಎಲ್ಲಾ ಸಮಸ್ಯೆಗಳೂ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಸಮಾಜವಾದಿ ಪಕ್ಷದಲ್ಲಿ ಸಮಸ್ಯೆ, ಸಂಕಟಗಳಾವುದೂ ಇಲ್ಲ. ಪಕ್ಷವೆಂದ ಮೇಲೆ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದನ್ನೇ ಕೆಲ ಜನರು ಪಕ್ಷದಲ್ಲಿ ಸಮಸ್ಯೆಯಿದೆ ಎಂದು ಹೇಳುತ್ತಾರೆ. ನಮ್ಮ ಪಕ್ಷದಲ್ಲಿ ಅಂತಹ ದೊಡ್ಡದಾದ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.

ಒಂದು ರಾಜ್ಯ ಮುಖ್ಯಮಂತ್ರಿಗಳಾದ ಮೇಲೆ ಮುಖ್ಯಮಂತ್ರಿಗಳು ಸ್ವಂತವಾಗಿ ಕೆಲ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇದು ಸಾಮಾನ್ಯ. ಇದರಿಂದ ಕೆಲ ಸಣ್ಣಪುಟ್ಟ ಸಮಸ್ಯೆಗಳು ಪಕ್ಷದಲ್ಲಿ ಎದುರಾಗುತ್ತವೆ. ಇಂತಹ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯುತ್ತದೆ. ಪ್ರಸ್ತುತ ಪಕ್ಷದಲ್ಲಿ ಕೆಲ ತಪ್ಪು ಕಲ್ಪನೆಗಳು ಮೂಡಿವೆಯೇ ಹೊರತು ಪಕ್ಷದಲ್ಲಿ ದೊಡ್ಡದಾದ ಸಮಸ್ಯೆಗಳಾವುದೂ ಇಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ. ಅಖಿಲೇಶ್ ಯಾದವ್ ಅವರನ್ನು ಸಮಾಜವಾದಿ ಪಕ್ಷ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿರುವ ನಿರ್ಧಾರ ಸರಿಯಾದುದಲ್ಲ ಎಂದಿದ್ದಾರೆ.

ಇದೇ ವೇಳೆ ಪಕ್ಷದೊಳಗೆ ಮೂಡಿರುವ ಬಿಕ್ಕಟ್ಟು ಪರಿಹಾರಕ್ಕೆ ಮುಲಾಯಂ ಸಿಂಗ್ ಅವರು ಸಂಸದೀಯ ಸಭೆ ಕರೆದಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇದೆಲ್ಲಾ ಗಾಸಿಪ್ ಗಳಷ್ಟೇ. ಸಂಸದೀಯ ಸಭೆ ಕರೆಯಲಾಗಿದೆ ಎಂದು ಯಾರು ಹೇಳಿದ್ದು? ನಾನು ಮಂಡಳಿಯ ಕಾರ್ಯದರ್ಶಿಯಾಗಿದ್ದೇನೆ. ಸಭೆ ನಡೆಸಲು ತೀರ್ಮಾನ ಕೈಗೊಂಡರೆ ಕರೆ ನೀಡಬೇಕಾದವನೇ ನಾನು. ಹೀಗಿರುವಾಗ ಸಭೆ ನಡೆಯುವುದಾದರೂ ಹೇಗೆ.

ಪಕ್ಷದಲ್ಲಿ ಟಿಕೆಟ್ ಕೊಡಬೇಕಾದರೆ, ರಾಜ್ಯಸಭೆಗೆ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಅಥವಾ ಪಕ್ಷದ ನಾಯಕರನ್ನು ಉಚ್ಛಾಟನೆ ಮಾಡಬೇಕಾದರೆ ಮಾತ್ರ ಸಂಸದೀಯ ಸಭೆಯನ್ನು ಕರೆಯಲಾಗುತ್ತದೆಯೇ ವಿನಃ ಇನ್ನಿತರೆ ವಿಚಾರಗಳಿಗೆ ಸಭೆಯನ್ನು ಕರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

SCROLL FOR NEXT