ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ವೇಳೆ 16 ಮಂದಿ ನೀರುಪಾಲು
ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ವೇಳೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ 16 ಭಕ್ತರು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು...
ಮುಂಬೈ/ನಾಗ್ಪುರ: ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ವೇಳೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ 16 ಭಕ್ತರು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ನಾಶಿಕ್ ನಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಓರ್ವ ಸೈನಿಕ ಸಂದೀಪ್ ಶಿರ್ಸಾತ್ ಹಾಗೂ ಸ್ಥಳೀಯ ಎಸ್.ರಾಮೇಶ್ವರ್ ಎಂಬುವವರು ಮುಸಲಗಾಂವನಲ್ಲಿ ನೀರುಪಾಲಾಗಿದ್ದರೆ, ನಿಲೇಶ್ ಪಾಟೀಲ್, ಭುಷಣ್ ಕಸ್ಬೆ, ಸುಮಿತ್ ಪವಾರ್, ಅಮೊಲ್ ಪಾಟೀಲ್ ಹಾಗೂ ರೋಶನ್ ಸಾಳ್ವೆ ಅವರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೃತಪಟ್ಟಿದ್ದಾರೆ.
ವಾರ್ಧಾ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಣೇಶ ವಿಸರ್ಜನೆ ವೇಳೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರುಪಾಲಾಗಿದ್ದು, ಓರ್ವ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ. ಆದರೆ ಮತ್ತೊರ್ವ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋದಾವರಿ ನದಿಯಲ್ಲಿ ಶಾಲಾ ಶಿಕ್ಷಕ ಪರಮೇಶ್ವರ ಶೆಂಗುಲೆ ಹಾಗೂ ನಾಂದೇಡ್ ನಲ್ಲಿ ಮತ್ತೊಬ್ಬ ವ್ಯಕ್ತಿ ನೀರುಪಾಲಾಗಿದ್ದಾರೆ.