ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಡೆದ ಪ್ರತಿಭಟನೆಯನ್ನು ವಿರೋಧಿಸಿ ಶುಕ್ರವಾರ ತಮಿಳುನಾಡು ಬಂದ್ ಆಚರಣೆ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಈಗಾಗಲೇ ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ನಗರಗಳಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಆಡಳಿತಾರೂಢ ಎಐಎಡಿಎಂಕೆ ಬಂದ್‌ಗೆ ಬೆಂಬಲ ನೀಡುವ ಕುರಿತು ಈ ವರೆಗೂ ನಿರ್ಧಾರ ಪ್ರಕಟಿಸಿಲ್ಲವಾದರೂ, ಪ್ರಮುಖ ವಿರೋಧ ಪಕ್ಷಗಳಾದ ಡಿಎಂಕೆ, ಕಾಂಗ್ರೆಸ್, ಡಿಎಂಡಿಕೆ, ತಮಿಳು ಮಾನಿಲ ಕಾಂಗ್ರೆಸ್ ಮತ್ತು ಪಿಎಂಕೆ ಪಕ್ಷಗಳು ಬೆಂಬಲ ಸೂಚಿಸಿವೆ. ಇನ್ನು ತಮಿಳುನಾಡಿನಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಬಂದ್ ಗೆ ತಮಿಳುನಾಡು ರಾಜ್ಯ ರಸ್ತೆಸಾರಿಗೆ ನಿಗಮ ಕೂಡ ಬೆಂಬಲ ಸೂಚಿಸಿದೆ. ಹೀಗಾಗಿ ಸರ್ಕಾರಿ ಬಸ್ ಸೇವೆ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ತಮಿಳುನಾಡಿನ ವಿವಿಧ ಆಟೋ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿ ರಸ್ತೆಗಿಳಿಯದಿರಲು ನಿರ್ಧರಿಸಿವೆ. ಬಂದ್ ದಿನದಂದು ತಮಿಳುನಾಡಿನ ಸುಮಾರು 4, 500ಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳು ಬಂದ್ ಆಗಲಿದ್ದು, ಪೆಟ್ರೋಲ್ ಬಂಕ್ ಮಾಲೀಕರು ಬಂದ್ ಗೆ ಬೆಂಬಲ ಘೋಷಿಸಿದ್ದಾರೆ.
ರಾಜ್ಯಾದ್ಯಂತ ಬಿಗಿ ಭದ್ರತೆ
ಇನ್ನು ತಮಿಳುನಾಡಿನಲ್ಲಿ ಕರೆ ನೀಡಿರುವ ಬಂದ್ ನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಮಿಳುನಾಡು ಸರ್ಕಾರ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 50 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾದೆ. ಪ್ರಮುಖವಾಗಿ ಕರ್ನಾಟಕ ಮೂಲದ ಸಂಸ್ಥೆಗಳು, ಬ್ಯಾಂಕ್‌ಗಳು, ಹೋಟೆಲ್‌ಗೆ ಹೆಚ್ಚಿನ ಭದ್ರತೆ ನೀಡಲು ಸೂಚನೆ ನೀಡಲಾಗಿದೆ. ಗುರುವಾರ ಬೆಳಗ್ಗೆ ಈರೋಡ್ ಸಮೀಪ ಕರ್ನಾಟಕ ನೋಂದಣಿಯ ಲಾರಿಗೆ ಇಬ್ಬರು ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಈ ಘಟನೆ ಬಳಿಕ ತಮಿಳುನಾಡಿನಲ್ಲಿ ಸಂಚರಿಸುವ ಕರ್ನಾಟಕ ನೋಂದಣಿಯ ವಾಹನಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಕರ್ನಾಟಕ-ತಮಿಳುನಾಡು ಗಡಿ ಉದ್ವಿಗ್ನ
ಇನ್ನು ಕರ್ನಾಟಕದ ಬಳಿಕ ಇದೀಗ ತಮಿಳುನಾಡಿನಲ್ಲೂ ಬಂದ್ ನಡೆಸಲಾಗುತ್ತಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶಗಳು ಉದ್ವಿಗ್ನಗೊಂಡಿದೆ. ಚೆನ್ನೈ ಹಾಗೂ ವಿವಿಧ ಜಿಲ್ಲೆಗಳಿಂದ ಕರ್ನಾಟಕಕ್ಕೆ ತೆರಳಬೇಕಿದ್ದ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳೂ ಕೂಡ ತಮಿಳುನಾಡಿಗೆ ಇನ್ನೂ ಸಂಚಾರ ಪುನರಾರಂಭಿಸಿಲ್ಲ. ತಮಿಳುನಾಡು ನೋಂದಣಿ ಹೊಂದಿರುವ ಟ್ರಕ್. ಲಾರಿ, ಟೆಂಪೊಗಳು ಗಡಿ ಭಾಗದಲ್ಲೇ ನಿಲುಗಡೆಯಾಗಿವೆ.