ದೇಶ

ಕೋಮುಘರ್ಷಣೆಯಾಗಿ ಮಾರ್ಪಟ್ಟ ಚುಡಾಯಿಸಿದ ಘಟನೆ; ಉತ್ತರಪ್ರದೇಶದಲ್ಲಿ 3 ಯುವಕರು ಬಲಿ

Srinivasamurthy VN

ಲಖನೌ: ಹುಡುಗಿ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಕೋಮುಗಲಭೆಯಾಗಿ ಮಾರ್ಪಟ್ಟು ಗುಂಡೇಟಿಗೆ ಮೂವರು ಯುವಕರು ಬಲಿಯಾದ  ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಹುಡುಗಿಯರನ್ನು ಚುಡಾಯಿಸಿದ ಯುವಕರ ಗುಂಪನ್ನು ಮತ್ತೊಂದು ಯುವಕರ ಗುಂಪು ಪ್ರಶ್ನಿಸಿದ್ದು, ಈ ವೇಳೆ ಎರಡೂ ಗುಂಪಿನ ನಡುವೆ ಮಾರಾಮಾರಿ  ನಡೆದಿದೆ. ಬಳಿಕ ಇದು ಎರಡು ಕೋಮಿನ ನಡುವಿನ ಘರ್ಷಣೆಯಾಗಿ ಮಾರ್ಪಟ್ಟಿದ್ದು, ಒಂದೇ ಕುಟುಂಬದ ಮೂವರು ಯುವಕರು ಗುಂಡೇಟಿಗೆ ಬಲಿಯಾಗಿದ್ದಾರೆ. ಅಂತೆಯೇ ಘಟನೆಯಲ್ಲಿ ಓರ್ವ  ಕೋಮಾ ಸ್ಥಿತಿಯಲ್ಲಿದ್ದು, ಗುಂಪು ಘರ್ಷಣೆಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚುವರಿ ಮಹಾನಿರ್ದೇಶಕ ದಲ್ಜೀತ್ ಚೌಧರಿ, ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವುದನ್ನು ಸ್ಥಳೀಯ  ಪೊಲೀಸರು ದೃಢಪಡಿಸಿದ್ದಾರೆ. ಹುಡುಗಿಯರನ್ನು ಚುಡಾಯಿಸಿದ್ದ ಯುವಕರ ಮನೆಗೆ ಇನ್ನೊಂದು ಸಮುದಾಯದ ಸದಸ್ಯರು ಬಂದೂಕು ಸಮೇತ ಆಗಮಿಸಿದ್ದರು ಎಂದು ಆರೋಪಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಬಿಜ್ನೋರ್‌ನ ಪೆದಾ ಎಂಬ ಗ್ರಾಮದಲ್ಲಿ ಶಾಲೆಗೆ ಹೊರಟಿದ್ದ ಹುಡುಗಿಯರನ್ನು ಒಂದು ಕೋಮಿನ ಯುವಕರು ಚುಡಾಯಿಸಿದ್ದಾರೆ. ಬಾಲಕಿಯರು ಸಮೀಪದ ನಯಗಾಂವ್  ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಈವ್ ಟೀಸಿಂಗ್ ವಿರೋಧಿಸಿ ನಯಗಾಂವ್ ನಲ್ಲಿರುವ ಇನ್ನೊಂದು ಸಮುದಾಯ ಪ್ರತಿಭಟನೆ ನಡೆಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಕೆಲ ದುಷ್ಕರ್ಮಿಗಳು   ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪೊಲೀಸರ ಅಮಾನತು

ಘಟನೆಗೆ ಸಂಬಂಧಿಸಿ ಓರ್ವ ಕಾನ್ಸ್‌ಟೇಬಲ್ ಮತ್ತು ಸಬ್‌ ಇನ್ಸ್‌ಪೆಕ್ಟರನ್ನು ಅಮಾನತುಗೊಳಿಸಲಾಗಿದ್ದು, ಅಂತೆಯೇ ಗಲಭೆ ನಡೆಸಿದ 6 ಮಂದಿ ಯುವಕರನ್ನು ಬಂಧಿಸಲಾಗಿದೆ ಎಂದು ಉತ್ತರ  ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಆದರೆ ಇದುವರೆಗೆ ಬಂಧಿತ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಎಂಬ ಆರೋಪಗಳು ಕೂಡ ಕೇಳಿಬಂದಿವೆ. ಇನ್ನು ಬಂಧಿತ ಆರೋಪಿಗಳ ಮೇಲೆ  ಮತ್ತೊಂದು ಕೋಮಿನವರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸ್‌ಠಾಣೆಗೆ ಬಿಗಿ ಬಂದೋಬಸ್ತ್ ನೀಡಲಾಗಿದೆ.

ಭುಗಿಲೆದ್ದ ಆಕ್ರೋಶ, ಹೆದ್ದಾರಿ ತಡೆ

ಘಟನೆ ಬಳಿಕ ಆರೋಪಿಗಳ ವಿರುದ್ಧ ಸ್ಥಳೀಯರ ಆಕ್ರೋಶ ಭುಗಿಲೆದ್ದಿದ್ದು, ಹೆದ್ದಾರಿ ತಡೆ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು  ಹರಸಾಹಸ ಪಡುತ್ತಿದ್ದು, ಪ್ರಾದೇಶಿಕ ಸಶಸ್ತ್ರ ಪಡೆಯ ನೆರವು ಕೋರಲಾಗಿದೆ.

SCROLL FOR NEXT