ನವದೆಹಲಿ: ಪಾಕಿಸ್ತಾನದಿಂದ ಪ್ರತ್ಯೇಕತೆ ಬಯಸುತ್ತಿರುವ ಬಲೂಚಿಸ್ತಾನದ ಪ್ರತ್ಯೇಕತವಾದಿಗಳಿಗೆ ರಾಜಕೀಯ ಬೆಂಬಲ ಹಾಗೂ ಭಾರತದಲ್ಲಿ ಆಶ್ರಯ ನೀಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ ಎಂಬ ವರದಿಗಳು ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂತಸ ಮೂಡಿಸಿದೆ.
ಭಾರತ ಸರ್ಕಾರದ ಉದ್ದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ, ಬಲೂಚಿಸ್ತಾನ ರಿಪಬ್ಲಿಕನ್ ಪಕ್ಷದ ನಾಯಕ ಬ್ರಹಮ್‌ದಾಗ್ ಬುಗ್ತಿ, "ಭಾರತದಲ್ಲಿ ನೆಲೆಸಲು ಅವಕಾಶ ಸಿಕ್ಕರೆ ನನ್ನ ಜನರಿಗಾಗಿ ಖಂಡಿತಾ ಹೋಗುವೆ ಎಂದು ಹೇಳಿದ್ದಾರೆ. ಭಾರತ ಸರ್ಕಾರದ ಆಶ್ರಯದ ಪ್ರಸ್ತಾವನೆ ಬಗ್ಗೆ ನಾವು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸೆ.19 ರಂದು ನಡೆಯಲಿರುವ ಬಲೂಚಿಸ್ತಾನ ರಿಪಬ್ಲಿಕನ್ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬುಗ್ತಿ ಮಾಹಿತಿ ನೀಡಿದ್ದಾರೆ.
ಬಲೂಚಿಸ್ತಾನ ರಿಪಬ್ಲಿಕನ್ ಪಕ್ಷದ(ಬಿಆರ್ ಪಿ) ಯ ಸ್ಥಾಪಕರಾಗಿರುವ ಬ್ರಹಮ್‌ದಾಗ್ ಬುಗ್ತಿ, 2006 ರಲ್ಲಿ ಅವರ ಅಜ್ಜ ಅಕ್ಬರ್ ಬುಗ್ತಿ ಅವರ ಹತ್ಯೆಯ ನಂತರ ಸ್ವಿಟ್ಜರ್ಲ್ಯಾಂಡ್ ನಲ್ಲಿ ವಾಸವಾಗಿದ್ದಾರೆ. 2006 ರಿಂದ ಮೊದಲ ನಾಲ್ಕು ವರ್ಷ ಅಫ್ಘಾನಿಸ್ತಾನದಲ್ಲಿ ಬುಗ್ತಿ ಆಶ್ರಯ ಪಡೆದಿದ್ದರು. ನಂತರ ಸ್ವಿಟ್ಜರ್ಲ್ಯಾಂಡ್ ನಲ್ಲಿ ರಾಜಕೀಯ ಆಶ್ರಯ ಸಿಕ್ಕ ನಂತರ ಕುಟುಂಬ ಸಮೇತ ಅಲ್ಲಿಗೆ ತೆರಳಿದ್ದರು.
ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬ್ರಹಮ್‌ದಾಗ್ ಬುಗ್ತಿ ಅವರ ಸಹಚರ- ಬೆಂಬಲಿಗರಿಗೆ ಭಾರತ ಸರ್ಕಾರ ಪೌರತ್ವ ನೀಡಲು ಸಿದ್ಧತೆ ನಡೆಸಿದೆ ಎಂಬ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಬುಗ್ತಿ ಪ್ರತಿಕ್ರಿಯೆ ನೀಡಿದ್ದು, ಅವಕಾಶ ಸಿಕ್ಕರೆ ಬಲೂಚಿಸ್ತಾನದ ಜನತೆಗಾಗಿ ಖಂಡಿತ ಭಾರತಕ್ಕೆ ಹೋಗುವೆ ಎಂದು ಹೇಳಿದ್ದಾರೆ.