ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು 29 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಮೆರಿಕ ಕಾಲಮಾನದ ಪ್ರಕಾರ ಶನಿವಾರ ರಾತ್ರಿ ಸ್ಫೋಟ ಸಂಭವಿಸಿದೆ.
ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯೂಯಾರ್ಕ್ ಮೇಯರ್, ಈ ವರೆಗೂ ಸ್ಫೋಟದ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಹೊತ್ತಿಲ್ಲ. ಆದರೆ ಇದೊಂದು ಅಂತಾರಾಷ್ಟ್ರೀಯ ಕೃತ್ಯವಾಗಿ ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್ ನ ವೆಸ್ಟ್ 23rd ಸ್ಟ್ರೀಟ್ ನಲ್ಲಿ ಸ್ಫೋಟ ಸಂಭವಿಸಿದ್ದು, ಉಗ್ರ ಸಂಘಟನೆಯೇ ಸ್ಫೋಟ ನಡೆಸಿದೆ ಎನ್ನಲು ಈ ವರೆಗೂ ಬಲವಾದ ಸಾಕ್ಷ್ಯಗಳು ದೊರೆತಿಲ್ಲ, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮೇಯರ್ ಬಿಲ್ ಡೇ ಬ್ಲಾಸಿಯೋ ಮಾಹಿತಿ ನೀಡಿದ್ದಾರೆ.
ಸುಧಾರಿತ ಸ್ಫೋಟಕ ಸಾಧನಗಳನ್ನು ಅಳವಡಿಸಿ, ಕಸದ ಬುಟ್ಟಿಯಲ್ಲಿಟ್ಟು ಸ್ಫೋಟ ನಡೆಸಲಾಗಿದೆ. ಬಾಂಬ್ ಸ್ಫೋಟಗೊಂಡ ಪ್ರದೇಶಗಳಲ್ಲಿ ಮತ್ತಷ್ಟು ಸ್ಫೋಟ ನಡೆಯುವ ಸಾಧ್ಯತೆ ಇರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ.