ದೇಶ

ಬಿಹಾರದಲ್ಲಿ ಬಸ್ಸು ಅಪಘಾತ: 35ಕ್ಕೂ ಹೆಚ್ಚು ಪ್ರಯಾಣಿಕರು ಸಾವು

Sumana Upadhyaya
ಮಧುಬನಿ: ಖಾಸಗಿ ಬಸ್ಸೊಂದು ಕೊಳಕ್ಕೆ ಬಿದ್ದ ಪರಿಣಾಮ 35ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಇನ್ನೂ ಅಧಿಕ ಮಂದಿ ಸಾವಿಗೀಡಾಗಿರುವ ಶಂಕೆಯಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ದೀಪಕ್ ಕುಮಾರ್ ಬರ್ನ್ ವಾಲ್ ತಿಳಿಸಿದ್ದಾರೆ. 
ಈ ಘಟನೆ ಮಧುಬನಿ ಜಿಲ್ಲೆಯಿಂದ 50 ಕಿಲೋ ಮೀಟರ್ ದೂರದಲ್ಲಿ ಬೆನ್ನಿಪೆಟ್ಟಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ. 65 ಜನರನ್ನು ಹೊತ್ತು ಸಾಗುತ್ತಿದ್ದ ಬಸ್ಸು ಮಧುಬನಿಯಿಂದ ಸೀತಾಮರ್ಹಿಗೆ ಸಾಗುತ್ತಿತ್ತು. ಅಲ್ಲಿ ಬಸ್ಸು ಮಗುಚಿ ಕೊಳಕ್ಕೆ ಉರುಳಿ ಬಿತ್ತು. ಕೆಲವರು ಈಜಿ ದಡ ಸೇರಿ ಬಚಾವಾದರು. ಕೆಲವರನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು.
 ಕಾಣೆಯಾದವರ ಶೋಧ ಕಾರ್ಯ ನಡೆಯುತ್ತಿದೆ. ಪಾಟ್ನಾದಲ್ಲಿ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಪಘಾತಕ್ಕೆ ನಿಖರ ಕಾರಣವನ್ನು ತಿಳಿಯಲಾಗುತ್ತಿದೆ ಎಂದು ಹೇಳಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ರಾಜ್ಯ ವಿಪತ್ತು ಕಾರ್ಯಪಡೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 
ಸತ್ತವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಬಸ್ಸು ದುರ್ಘಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಬಿಹಾರದ ಮಧುಬನಿಯಲ್ಲಿ ಬಸ್ಸು ಅಪಘಾತದ ವಿಷಯ ಕೇಳಿ ತೀವ್ರ ಬೇಸರವಾಗಿದೆ. ಈ ದುಃಖದ ವೇಳೆಯಲ್ಲಿ ಅಪಘಾತದಲ್ಲಿ ಸಾವಿಗೀಡಾದವರ ಕುಟುಂಬದವರಿಗೆ ಮಾನಸಿಕ ಸ್ಥೈರ್ಯ ತುಂಬಬೇಕಾಗಿದೆ ಎಂದು ಹೇಳಿದ್ದಾರೆ.
SCROLL FOR NEXT