ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಮಿಗ್ 21 ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿದೆ.
ಅಪಘಾತದಲ್ಲಿ ಪೈಲಟ್ ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಿಲ್ಲದೇ ಪೈಲಟ್ ಅನ್ನು ಹೊರ ತೆಗೆಯಲಾಗಿದೆ. ಮೂಲಗಳ ಪ್ರಕಾರ ಲ್ಯಾಂಡಿಂಗ್ ವೇಳೆ ವಿಮಾನ ಪೈಲಟ್ ನ ನಿಯಂತ್ರಣ ತಪ್ಪಿದೆ. ಈ ವೇಳೆ ವಿಮಾನದ ರೆಕ್ಕೆ ರನ್ ವೇ ಗೆ ಉಜ್ಜಿ ಕೊಂಚ ದೂರ ಹಾಗೆಯೇ ಚಲಿಸಿದೆ. ಬಳಿಕ ನಿಂತ ವಿಮಾನದಿಂದ ಕೂಡಲೇ ರಕ್ಷಣಾ ಸಿಬ್ಬಂದಿಗಳು ಪೈಲಟ್ ನನ್ನು ಹೊರಗೆಳೆದಿದ್ದಾರೆ. ಘಟನೆಯಿಂದಾಗಿ ವಿಮಾನಕ್ಕೆ ಹಾನಿಯಾಗಿದ್ದು, ಇದೀಗ ವಿಮಾನವನ್ನು ರನ್ ವೇಯಿಂದ ಪಕ್ಕಕ್ಕೆ ಸರಿಸಲಾಗಿದೆ.
ಅಪಘಾತದಿಂದಾಗಿ ರನ್ ವೇ ಅಲ್ಪ ಪ್ರಮಾಣದ ಹಾನಿಯಾಗಿದ್ದು, ತಾತ್ಕಾಲಿಕವಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.