ಉರಿ ಉಗ್ರ ದಾಳಿ: 'ರಕ್ತಕ್ಕೆ ರಕ್ತವೇ ಪ್ರತೀಕಾರ- ಹುತಾತ್ಮ ಯೋಧರ ಪತ್ನಿಯರು
ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರ ದಾಳಿಯನ್ನು ಸೈನಿಕರ ವಿಧವೆಯರು ಖಂಡಿಸಿದ್ದು, ರಕ್ತಕ್ಕೆ ರಕ್ತವೇ ಪ್ರತೀಕಾರ ದಾಳಿಗೆ ದಿಟ್ಟ ಉತ್ತರ ನೀಡಬೇಕಿದೆ...
ಮಥುರಾ: ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರ ದಾಳಿಯನ್ನು ಸೈನಿಕರ ವಿಧವೆಯರು ಖಂಡಿಸಿದ್ದು, ರಕ್ತಕ್ಕೆ ರಕ್ತವೇ ಪ್ರತೀಕಾರ ದಾಳಿಗೆ ದಿಟ್ಟ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ಧರ್ಮಾವತಿ ಎಂಬುವವರ ಪತಿ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2013ರ ಜನವರಿ 8 ರಂದು ಹುತಾತ್ಮರಾಗಿದ್ದರು. ಅಂದು ಸುಷ್ಮಾ ಸ್ವರಾಜ್ ಅವರು ಅಧಿಕಾರಕ್ಕೆ ಬಂದಿರೆ 10 ತಲೆಗಳನ್ನು ಕಡಿದು ತರುತ್ತೇವೆಂದು ಹೇಳಿದ್ದರು. ಇದೀಗ ಉರಿ ಸೆಕ್ಟರ್ ನಲ್ಲಿ 18 ಯೋಧರು ಹುತಾತ್ಮರಾಗಿದ್ದಾರೆ. ಇದೀಗ ಕನಿಷ್ಟ ಪಕ್ಷ 36 ತಲೆಗಳನ್ನಾದರು ಕಡಿದು ತರಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮುವಿನಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಜುಲೈ 30 ರಂದು ಬಬ್ಲು ಕುಮಾರ್ ಎಂಬ ಯೋಧನೊಬ್ಬ ಹುತಾತ್ಮನಾಗಿದ್ದ. ತಮ್ಮ ಪತಿ ಸಾವಿನ ಕುರಿತಂತೆ ಮಾತನಾಡಿರುವ ರವಿತಾ, ಕೇಂದ್ರ ಅಸ್ಥಿರ ನೀತಿಗಳೇ ಪತಿ ಸಾವಿಗೆ ಕಾರಣವೆಂದು ಹೇಳಿದ್ದಾರೆ.
1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೊರಾನ್ ಸಿಂಗ್ ಅವರ ಪತ್ನಿ ಕಮ್ಲೇಶ್ ದೇವಿ ಮಾತನಾಡಿ, ಹೇಡಿತನದಿಂದ ದಾಳಿ ಮಾಡುವವರ ವಿರುದ್ಧ ಯುದ್ಧ ಮಾಡಲು ಸಂಪೂರ್ಣವಾಗಿ ಭಾರತೀಯ ಸೇನೆಗೆ ಸ್ವತಂತ್ರವನ್ನು ನೀಡಬೇಕೆಂದು ಹೇಳಿದ್ದಾರೆ.
ಯೋಧನ ಪತ್ನಿಯೊಬ್ಬಳು ವಿಧವೆಯಾದಾಗ ಆಕೆ ಪಡುವಂತಹ ನೋವು, ವೇದನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ರೀತಿಯ ದಾಳಿ ವಿರುದ್ಧ ಅಧಿಕಾರಿಗಳು ನೇರವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹುತಾತ್ಮ ಯೋಧ ಶಾಹೀದ್ ಸಮೋದ್ ಕುಮಾರ್ ಚೌದರಿ ಅವರ ಪತ್ನಿ ಸೀಮಾ ಚೌಧರಿಯವರು ಹೇಳಿದ್ದಾರೆ.