ಮದುವೆಗೆ ಒಪ್ಪದ ಯುವತಿಯನ್ನು ಕಟ್ಟಡದಿಂದ ತಳ್ಳಿದ ಭೂಪ
ನವದೆಹಲಿ: ಪ್ರೀತಿಗೆ ಒಪ್ಪದ ಯುವತಿಗೆ ಸಾರ್ವಜನಿಕವಾಗಿ 24 ಬಾರಿ ಚೂರಿ ಇರಿದು ಹತ್ಯೆ ಮಾಡಿದ್ದ ಬೀಭತ್ಸ ಘಟನೆ ವರದಿಯಾದ ಬೆನ್ನಲ್ಲೇ ಇದೀಗ ಮದುವೆಗೆ ಒಪ್ಪದ ಯುವತಿಯನ್ನು ಮನೆಯ ಬಾಲ್ಕನಿಯಿಂದ ತಳ್ಳಿರುವ ದಾರುಣ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ಕಳೆದ ಸೋಮವಾರ 6.30ರ ಸುಮಾರಿಗೆ ದೆಹಲಿಯ ಮಂಗೋಲ್ಪುರಿಯಲ್ಲಿ ಅವಂತಿಕ ಎನ್ಕ್ಲೇವ್ ನಲ್ಲಿ ವಾಸವಿದ್ದ 21 ವರ್ಷದ ಯುವತಿ ಮನೆಗೆ ಆರೋಪಿ 28 ವರ್ಷದ ಅಮಿತ್ ತನ್ನ ಸಹೋದರಿಯೊಂದಿಗೆ ಬಂದಿದ್ದಾನೆ. ಈ ವೇಳೆ ಯುವತಿಗೆ ತನ್ನ ಜತೆ ಮದುವೆಯಾಗುವಂತೆ ಅಮಿತ್ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಆಕೆಯನ್ನು ಬಾಲ್ಕನಿಯಿಂದ ಕೆಳಗೆ ತಳ್ಳಿದ್ದಾನೆ.
ಬಾಲ್ಕನಿಯಿಂದ ಕೆಳಗೆ ಬಿದ್ದ ಯುವತಿಯನ್ನು ಕೂಡಲೇ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರವಾಗಿ ಗಾಯಗೊಂಡಿರುವ ಯುವತಿ ಜೀವ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿ ಅಮಿತ್ ನನ್ನು ಸ್ಥಳೀಯ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಅಮಿತ್ ಯುವತಿ ಹಾಗೂ ತಾನು ಫೇಸ್ ಬುಕ್ ಮೂಲಕ ಕಳೆದ ಎರಡು ವರ್ಷಗಳ ಹಿಂದೆ ಪರಿಚಯವಾಗಿದ್ದು, ಅಲ್ಲಿಂದ ನಮ್ಮ ಮಧ್ಯೆ ಸಂಬಂಧ ಬೆಳೆದಿತ್ತು. ಈ ಮಧ್ಯೆ ಯುವತಿ ತನ್ನಿಂದ 1 ಲಕ್ಷ ರುಪಾಯಿ ಹಣ ತೆಗೆದುಕೊಂಡಿದ್ದು ಇನ್ನು ಹಿಂದಿರುಗಿಸಿಲ್ಲ ಎಂದು ಹೇಳಿದ್ದಾನೆ.
ಈ ಮಧ್ಯೆ ಯುವತಿಯ ಪೋಷಕರು ಅಮಿತ್ ಪೂರ್ವಾಪರ ವಿಚಾರಿಸಿದಾಗ ಆತ ನಿರುದ್ಯೋಗಿ ಎಂದು ತಿಳಿದುಬಂದಿದೆ.