ಶ್ರೀನಗರ: ಉರಿ ಉಗ್ರ ದಾಳಿ ಬಳಿಕ ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ ಮುಂದುವರೆದಿದ್ದು, ಗುರುವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನಾಪಡೆಗಳು ಓರ್ವ ಉಗ್ರನನ್ನು ಹತ್ಯೆಗೈದಿವೆ.
18 ಸೈನಿಕರ ಸಾವಿಗೆ ಕಾರಣವಾದ ಉರಿ ಉಗ್ರ ದಾಳಿ ಬೆನ್ನಲ್ಲೇ ಮತ್ತೆ ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ್ದು, ಕಾಶ್ಮೀರದ ಬಂಡಿಪೊರಾದಲ್ಲಿ ಭದ್ರತ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರತ್ತ ಗುಂಡು ಹಾರಿಸುತ್ತಿದ್ದ ಓರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಅವಿತಿರುವ ಮತ್ತಷ್ಟು ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದ ಭಾನುವಾರ ಉರಿ ಸೆಕ್ಟರ್ ಮೇಲಿನ ಉಗ್ರ ದಾಳಿ ಪ್ರಕರಣ ಸಂಬಂಧ ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸೇನೆಗೆ ಸೂಚನೆ ನೀಡಲಾಗಿದೆ. ಉರಿ ಉಗ್ರ ದಾಳಿ ವೇಳೆ ಭಾರತಕ್ಕೆ ನುಸುಳಿದ್ದಾರೆ ಎಂದು ಹೇಳಲಾಗುತ್ತಿರುವ 12 ಮಂದಿ ಉಗ್ರರ ಪೈಕಿ 4 ಮಂದಿಯನ್ನು ಕೊಲ್ಲಲಾಗಿದ್ದು, ಉಳಿದಿರುವ 8 ಮಂದಿ ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಶ್ರೀನಗರ ಹೆದ್ದಾರಿ ಮತ್ತು ಪೂಂಛ್ ಸೆಕ್ಟರ್ ನಲ್ಲಿ ಉಗ್ರರು ಅವಿತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸೈನಿಕರು ತೀವ್ರ ಶೋಧ ನಡೆಸುತ್ತಿದ್ದಾರೆ.
ಉಗ್ರರಿಗೆ ಸ್ಥಳೀಯ ನಿವಾಸಿಗಳು ಆಶ್ರಯ ನೀಡುತ್ತಿರುವುದು ಸೈನಿಕರ ಕಾರ್ಯಾಚರಣೆಗೆ ತೊಡಕಾಗಿದ್ದು, ಸ್ಥಳೀಯರು ಯಾರು ಉಗ್ರರು ಯಾರು ಎಂದು ಗುರುತಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.