ನವದೆಹಲಿ: ಸಿವಾನ್ ಪತ್ರಕರ್ತ ರಾಜ್ ದಿಯೊ ರಂಜನ್ ಕೊಲೆ ಪ್ರಕರಣ ಸಂಬಂಧ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಮತ್ತು ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಬಿಹಾರದಲ್ಲಿ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ದೆಹಲಿಗೆ ವರ್ಗಾಹಿಸಿ ಎಂದು ಕೋರಿ ಕೊಲೆಯಾದ ಪತ್ರಕರ್ತನ ಪತ್ನಿ ಆಶಾ ರಂಜನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ ಸಿ.ನಾಗಪ್ಪನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಬಿಹಾರ ಸರ್ಕಾರ ಹಾಗೂ ತನಿಖಾ ಸಂಸ್ಥೆ ಸಿಬಿಐಗೂ ನೋಟಿಸ್ ಜಾರಿ ಮಾಡಿದೆ.
ಪತ್ರಕರ್ತನ ಹತ್ಯೆಯ ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಮೇಲುಸ್ತುವಾರಿ ವಹಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಆರೋಪಿಗಳಿಗೆ ಹಾಗೂ ಬಿಹಾರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಪತ್ರಕರ್ತನ ಪತ್ನಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿದೆ.
ರಂಜನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಹಾಬುದ್ದೀನ್ ಸಹಚರ ಮೊಹಮ್ಮದ್ ಕೈಫ್ ಅಲಿಯಾಸ್ ಬಂಟಿ ಜತೆ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ತೆಗೆಸಿಕೊಂಡಿರುವ ಚಿತ್ರ ವೈರಲ್ ಆಗಿತ್ತು.