ರಾಂಚಿ: ಆಸ್ಪತ್ರೆಯಲ್ಲಿ ತಟ್ಟೆಗಳ ಕೊರತೆ ಇದೆ ಎಂದು ಮಹಿಳಾ ರೋಗಿಯೊಬ್ಬರಿಗೆ ನೆಲದ ಮೇಲೆ ಊಟ ಹಾಕಿರುವ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದಿದೆ.
ಖಾಸಗಿ ದಿನಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ರಾಂಚಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗಳಿಗೇ ನೆಲದ ಮೇಲೆ ಊಟಾ ಹಾಕುತ್ತಿರುವುದಾಗಿ ವರದಿ ಮಾಡಿದೆ. ಜಾರ್ಖಂಡ್ ನಲ್ಲೇ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಎಂದು ಖ್ಯಾತಿ ಗಳಿಸಿರುವ ರಾಂಚಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿರುವುದು ದಿಗ್ಭ್ರಾಂತಿಗೆ ಕಾರಣವಾಗಿದೆ. ಕೈ ಗೆ ಬ್ಯಾಂಡೇಜ್ ಧರಿಸಿರುವ ಮಹಿಳೆಯೊಬ್ಬಳು ನೆಲದ ಮೇಲೆ ಕುಳಿತು ನೆಲದ ಮೇಲೆ ಹಾಕಿರುವ ಅನ್ನವನ್ನು ತಿನ್ನುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ನೀಡುವ ತಟ್ಟೆಗಳ ವ್ಯಾಪಕ ಕೊರತೆ ಇದ್ದು, ಇದೇ ಕಾರಣಕ್ಕೆ ನೆಲದ ಮೇಲೆ ಊಟ ಬಡಿಸಲಾಗಿದೆ ಎಂಬ ಬೇಜವಾಬ್ದಾರಿ ಉತ್ತರ ಆಸ್ಪತ್ರೆ ಆಡಳಿತ ಮಂಡಳಿಯಿಂದ ಬಂದಿದೆ. ಇನ್ನು ಈ ಬಗ್ಗೆ ರೋಗಿಗಳನ್ನು ವಿಚಾರಿಸಿದರೆ ತಟ್ಟೆ ನೀಡುವಂತೆ ಸಿಬ್ಬಂದಿಯನ್ನು ಕೇಳಿದರೆ ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ಕೆಲ ರೋಗಿಗಳು ಆರೋಪಿಸಿದ್ದಾರೆ. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ವೈದ್ಯಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸರ್ಕಾರಿ ಆಸ್ಪತ್ರೆಗಾಗಿ ಜಾರ್ಖಂಡ್ ಸರ್ಕಾರ ಪ್ರತೀ ವರ್ಷ ಸುಮಾರು 300 ಕೋಟಿ ರು.ಗಳನ್ನು ವೆಚ್ಚ ಮಾಡುತ್ತಿದ್ದು, ರೋಗಿಗಳಿಗೆ ನೀಡಲು ತಟ್ಟೆ ಕೂಡ ಇಲ್ಲವೇ ಎಂಬ ಅನುಮಾನ ಕಾಡತೊಡಗಿದೆ. ಸರ್ಕಾರ ನೀಡುತ್ತಿರುವ ಹಣ ಭ್ರಷ್ಟರ ಪಾಲಾಗುತ್ತಿದೆಯೇ ಎಂಬ ಅನುಮಾನ ಕೂಡ ಕಾಡತೊಡಗಿದೆ.