ನವದೆಹಲಿ: ಸೆ.23 ರಂದು ಭಾರತ- ಫ್ರಾನ್ಸ್ ನಡುವೆ ನಡೆದ ರಾಫೆಲ್ ಜೆಟ್ ಖರೀದಿ ಒಪ್ಪಂದದ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ 126 ರಾಫೆಲ್ ಜೆಟ್ ಗಾಲ ಖರೀದಿಯನ್ನು ಅಂತಿಮಗೊಳಿಸಲಾಗಿತ್ತು. ಆದರೆ ಬಿಜೆಪಿ ಅದನ್ನು ಕೇವಲ 36 ಕ್ಕೆ ಇಳಿಸಿದೆ. ಭಾರತೀಯ ವಾಯು ಸೇನೆ ಪರಿಸ್ಥಿತಿ ಅಸ್ಥಿರವಾಗಿದ್ದು ಸೂಕ್ಷ್ಮವಾಗಿದೆ ಇಂತಹ ಪರಿಸ್ಥಿತಿಯಲ್ಲೂ ಬಿಜೆಪಿ ಖರೀದಿಸಬೇಕಿದ್ದ ಅತ್ಯಾಧುನಿಕ ರಾಫೆಲ್ ಜೆಟ್ ಗಳ ಸಂಖ್ಯೆಯನ್ನು 36 ಕ್ಕೆ ಇಳಿಸಿದೆ ಎಂದು ಕಾಂಗ್ರೆಸ್ ನಾಯಕ ಮಾಜಿ ರಕ್ಷಣಾ ಸಚಿವ ಎಕೆ ಆಂಟೋನಿ ಆರೋಪಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ವಾಯು ಸೇನೆಗೆ ಕನಿಷ್ಠ 126 ಅತ್ಯಾಧುನಿಕ ಫೈಟರ್ ಜೆಟ್ ಗಳು ಅಗತ್ಯವಿತ್ತು. ಆದರೆ ಈಗ ಅನುಮತಿ ನೀಡಲಾಗಿರುವುದು ಕೇವಲ 42 ಕ್ಕೆ ಮಾತ್ರವಾಗಿದ್ದು ವಾಯುಪಡೆಯ ಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಅತ್ಯಾಧುನಿಕ ಫೈಟರ್ ಜೆಟ್ ಗಳ 32 ತುಕಡಿಗಳು ಅಗತ್ಯವಿದೆ. 2022 ರ ವೇಳೆಗೆ ಇದು 25 ಕ್ಕೆ ಇಳಿಕೆಯಾಗಲಿದೆ ಎಂದು ಮಾಜಿ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ. ಒಂದೆಡೆ ಪಾಕಿಸ್ತಾನ, ಚೀನಾ ತಮ್ಮ ಸೇನಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಭಾರತದ ಅಂತರ ಹೆಚ್ಚಾಗುತ್ತಿದೆ. ಇದನ್ನು ಸರಿದೂಗಿಸುವುದಕ್ಕೆ ಕೇಂದ್ರ ಸರ್ಕಾರ ಯಾವ ರೀತಿಯ ಯೋಜನೆ ರೂಪಿಸಿದೆ ಎಂದು ರಕ್ಷಣಾ ಸಚಿವ ಎಕೆ ಆಂಟನಿ ಪ್ರಶ್ನಿಸಿದ್ದಾರೆ.