ದೇಶ

ಭಾರತ ವಿಶ್ವದಲ್ಲೇ 7ನೇ ಅತೀ ದೊಡ್ಡ ಸಮುದ್ರ ಆಹಾರ ರಫ್ತು ಮಾಡುವ ದೇಶ: ಸಿತಾರಾಮನ್

Manjula VN

ವಿಶಾಖಪಟ್ಟಣ: ಭಾರತವು ವಿಶ್ವದಲ್ಲಿಯೇ 7ನೇ ಅತೀ ದೊಡ್ಡ ಸಮುದ್ರ ಆಹಾರ ರಫ್ತು ಮಾಡುವ ದೇಶವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 3 ದಿನಗಳ ಭಾರತ ಅಂತಾರಾಷ್ಟ್ರೀಯ ಸಮುದ್ರ ಆಹಾರ ಪ್ರದರ್ಶನದ 20ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಸಮುದ್ರ ಆಹಾರ ಉತ್ಪಾದನೆಯಲ್ಲಿ ವ್ಯಾಪಾರಸ್ಥರು ತೋರುತ್ತಿರುವ ಆಸಕ್ತಿ, ಅವರ ನಿಲುವು ಮತ್ತು ಉದ್ಯಮಶೀಲತೆ ಆಹಾರ ಕೈಗಾರಿಕೆಯ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ವ್ಯಾಪಾರಸ್ಥರ ಪರಿಶ್ರಮದಿಂದಲೇ ಭಾರತ ಸಮುದ್ರ ಆಹಾರ ರಫ್ತಿನಲ್ಲಿ 7ನೇ ಸ್ಥಾನವೇರಲು ಸಾಧ್ಯವಾಗಿದೆ. ಹೀಗಾಗಿ ವ್ಯಾಪಾರಸ್ಥರನ್ನು ಶ್ಲಾಘಿಸಲು ನಾನು ಇಚ್ಛಿಸುತ್ತೇನೆಂದು ಹೇಳಿದ್ದಾರೆ.

ದೇಶೀಯ ಮತ್ತು ರಫ್ತು ಮಾರುಕಟ್ಟೆಗೆ ಸಮುದ್ರ ಆಹಾರ ಉತ್ಪಾದನೆ, ಆಧುನಿಕ ತಂತ್ರಜ್ಞಾನ, ಸುರಕ್ಷತೆ ಮತ್ತು ಸಮರ್ಥ ಭಾರತೀಯ ಸಮುದ್ರ ಆಹಾರ ಸಂಸ್ಕೃತಿ ಪ್ರಚಾರದ ಉದ್ದೇಶದಿಂದ ಸಮುದ್ರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪಿಇಡಿಎ) ಮತ್ತು ಭಾರತದ ಸಮುದ್ರ ಆಹಾರ ರಫ್ತುಗಳ ಸಂಘ (ಎಸ್ಇಎಐ) ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಪ್ರಸಾರ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

SCROLL FOR NEXT