ದೇಶ

ಕಾಶ್ಮೀರ ಸಮಸ್ಯೆಗೆ ಗಡಿನಿಯಂತ್ರಣ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿಸುವುದೇ ಪರಿಹಾರ: ನಟವರ್ ಸಿಂಗ್

Srinivas Rao BV

ನವದೆಹಲಿ: ಉರಿ ಸೆಕ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಾಗೂ ಯೋಧರ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್, ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಹಾಗೂ ಭಾರತದ ವೈಷಮ್ಯಕ್ಕೆ ಅಂತ್ಯ ಹಾಡಲು ಗಡಿ ನಿಯಂತ್ರಣ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿ ಪರಿವರ್ತಿಸುವುದೊಂದೇ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯಕ್ಕೆ ಭಾರತ- ಪಾಕ್ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಇರುವುದು ಗಡಿ ನಿಯಂತ್ರಣ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿ ಮಾರ್ಪಾಡು ಮಾಡುವುದೊಂದೇ ದಾರಿ ಎಂದು ನಟವರ್ ಸಿಂಗ್ ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದೊಂದಿಗಿನ ವಿವಾದವನ್ನು ಬಗೆಹರಿಸಿಕೊಳ್ಳಲು ಇದ್ದ ಎಲ್ಲಾ ಮಾರ್ಗಗಳನ್ನೂ ಅನುಸರಿಸಿ ಆಗಿದೆ, ಈಗ ಕಾಣುತ್ತಿರುವುದು ಇದೊಂದೇ ಮಾರ್ಗ, ಇದನ್ನು ನಾನು ಈಗ ಹೇಳುತ್ತಿಲ್ಲ 10- 15 ವರ್ಷಗಳಿಂದಲೂ ಹೇಳುತ್ತಿದ್ದೇನೆ ಎಂದು ನಟವರ್ ಸಿಂಗ್ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸಹ ಗಡಿ ನಿಯಂತ್ರಣ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿಸುವುದೊಂದೇ ಪರಿಹಾರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾಶ್ಮೀರ ಸಮಸ್ಯೆ ಭಾರತದ ಅತ್ಯಂತ ಜಟಿಲ ಸಮಸ್ಯೆಯಾಗಿದ್ದು ಕಾಲಕ್ರಮೇಣ ಅಂತಾರಾಷ್ಟ್ರೀಯ ವ್ಯವಹಾರಗಳೊಂದಿಗೆ ಸೇರಿ ಹಲವು ಜನರು ಈ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವುದಕ್ಕೆ ನಾವು 70 ವರ್ಷ ಯತ್ನಿಸಿದ್ದೇವಾದರೂ ಈ ವರೆಗೂ ಸಮಸ್ಯೆ ಬಗೆಹರಿದಿಲ್ಲ. ಈ ನಡುವೆ ಪಾಕಿಸ್ತಾನ ಸಹ ಅಣ್ವಸ್ತ್ರ ರಾಷ್ಟ್ರವಾಗಿದ್ದು ಯುದ್ಧ ಮಾಡುವುದು ಸೂಕ್ತವಲ್ಲ ಎಂದು ನಟವರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT