ಲಕ್ನೋ: ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಬಿಎಸ್ ಪಿ ನಾಯಕಿ ಮಾಯಾವತಿ, ತನ್ನ ದೇಶದ ಜನರ ಅಭಿವೃದ್ಧಿಗೆ ಗಮನ ಹರಿಸಬೇಕೆಂದು ಪಾಕಿಸ್ತಾನಕ್ಕೆ ಸಲಹೆ ನೀಡುವ ಪ್ರಧಾನಿ, ತಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ತಮ್ಮ ದೇಶದ ಜನರ ಏಳ್ಗೆಯನ್ನು ನೋಡಿಕೊಳ್ಳಿ ಎಂದು ಪಾಕಿಸ್ತಾನಕ್ಕೆ ಸಲಹೆ ಮಾಡುವುದು ಒಳ್ಳೆಯದು. ಆದರೆ ಪ್ರಧಾನಿಗಳು ತಮ್ಮ ಸರ್ಕಾರದ ಕೆಲಸಗಳ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉರಿ ಭಯೋತ್ಪಾದಕ ದಾಳಿಯಲ್ಲಿ 18 ಸೇನಾ ಯೋಧರು ಮೃತಪಟ್ಟ ನಂತರ ದೇಶದ ಜನರಲ್ಲಿ ಆಕ್ರೋಶ, ಸಿಟ್ಟು ಮೂಡಿದೆ. ನಮ್ಮ ದೇಶದ ಜನರು ವಾಸ್ತವ ಭರವಸೆ ಮತ್ತು ಪರಿಣಾಮಕಾರಿ ಕ್ರಮಗಳನ್ನು ಪ್ರಧಾನಿಯವರಿಂದ ಬಯಸುತ್ತಾರೆ. ಇಂತಹ ಘಟನೆ ಮರುಕಳಿಸಬಾರದೆಂದು ಬಯಸುತ್ತಾರೆ ಎಂದು ಮಾಯಾವತಿ ಸುದ್ದಿಗಾರರ ಬಳಿ ಹೇಳಿದರು.
ಸೈನಿಕರ ಮೇಲೆ ಭಯೋತ್ಪಾದಕ ದಾಳಿ ಪುನರಾವರ್ತೆಗೊಳ್ಳುತ್ತಿರುವುದರಿಂದ ಜನರು ಬಿಜೆಪಿ ಸರ್ಕಾರದ ಬಗ್ಗೆ ತೀವ್ರ ಹತಾಶೆಗೊಂಡಿದ್ದಾರೆ. ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡುವಲ್ಲಿ ಪ್ರಧಾನಿ ಸಂಪೂರ್ಣ ವಿಫಲರಾಗಿದ್ದಾರೆ. ನಮ್ಮ ದೇಶದ ಗಡಿಭಾಗ ಸುರಕ್ಷಿತವಾಗಿಲ್ಲ. ಭಯೋತ್ಪಾದಕರ ಒಳ ನುಸುಳುವಿಕೆ ಹೆಚ್ಚಾಗುತ್ತಿದೆ. ಸೈನಿಕರು ಭಯೋತ್ಪಾದಕ ಕೃತ್ಯಗಳಿಗೆ ತಮ್ಮ ಜೀವವನ್ನು ತ್ಯಾಗ ಮಾಡಬೇಕಗಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿರುವುದರಿಂದ ಹೀಗಾಗುತ್ತಿದೆ. ಇದಕ್ಕೆ ಶಾಶ್ವತ ನೀತಿ ರಚಿಸುವ ಬದಲು ಮೋದಿ ಸರ್ಕಾರ ಜನರನ್ನು ತಪ್ಪುದಾರಿಗೆಳೆಯುತ್ತಿದೆ. ನಿರುದ್ಯೋಗ, ಬಡತನ ಮತ್ತು ಅನರಕ್ಷತೆ ವಿರುದ್ಧ ಹೋರಾಡಿ ಎಂದು ಪಾಕಿಸ್ತಾನಕ್ಕೆ ಸಲಹೆ ನೀಡಿ ನಮ್ಮ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದರು.
ರಾಜ್ಯಗಳ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಜನರನ್ನು ಭಾವನಾತ್ಮಕವಾಗಿ ಬೆದರಿಕೆಯೊಡ್ಡುತ್ತಿದ್ದಾರೆ. ಇದು ರಾಜಕೀಯ ಪಿತೂರಿಯಾಗಿದ್ದು ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಜನತೆ ಈ ಬಗ್ಗೆ ಜಾಗೃತರಾಗಿರಬೇಕು ಎಂದು ಮಾಯಾವತಿ ಸಲಹೆ ನೀಡಿದರು.
ಪ್ರಧಾನಿ ಮೋದಿ ನಿನ್ನೆ ಕೇರಳದ ಕೋಝಿಕ್ಕೋಡಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿ ಅವರು ಹೀಗಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics