ಸೀತಾಪುರ: ಬಿಜೆಪಿ ಮತ್ತು ಆರ್'ಎಸ್ಎಸ್ ಕಡೆಯ ಜನರೇ ನನ್ನ ಮೇಲೆ ದಾಳಿ ಮಾಡಿದ್ದು, ಈ ರೀತಿಯ ದಾಳಿಗಳಿಗೆ ನಾನು ಹೆದರುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸೋಮವಾರ ಹೇಳಿದ್ದಾರೆ.
ಉತ್ತರಪ್ರದೇಶದ ಸೀತಾಪುರದಲ್ಲಿ ರಾಹುಲ್ ಗಾಂಧಿಯವರು ಕಿಸಾನ್ ಯಾತ್ರೆಯನ್ನು ಆರಂಭಿಸಿದ್ದರು. ತೆರೆದ ವಾಹನವೊಂದರಲ್ಲಿ ರಾಹುಲ್ ಪ್ರಯಾಣಿಸುತ್ತಿದ್ದರು. ಈ ವೇಳೆ ಕಿಡಿಗೇಡಿಯೊಬ್ಬ ರಾಹುಲ್ ಮೇಲೆ ಶೂವನ್ನು ಎಸೆದಿದ್ದ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಹುಲ್, ನಾನು ತೆರೆದ ವಾಹನದಲ್ಲಿ ಚಲಿಸುತ್ತಿದ್ದೆ. ಈ ವೇಳೆ ಶೂವೊಂದನ್ನು ನನ್ನ ಮೇಲೆ ಎಸೆಯಲಾಯಿತು. ಆದರೆ, ಅದು ನನ್ನ ಮೇಲೆ ಬೀಳಲಿಲ್ಲ. ಬಿಜೆಪಿ ಹಾಗೂ ಆರ್'ಎಸ್ಎಸ್ ಕಡೆಯ ಜನರೇ ನನ್ನ ಮೇಲೆ ದಾಳಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಆರ್'ಎಸ್ಎಸ್ ನನ್ನ ಮೇಲೆ ಎಷ್ಟು ಶೂಗಳನ್ನು ಬೇಕಾದರೂ ಎಸೆಯಲಿ. ಆದರೆ, ನನ್ನ ಹೆಜ್ಜೆಯನ್ನು ನಾನು ಹಿಂದಕ್ಕೆ ಇಡುವುದಿಲ್ಲ. ಬಿಜೆಪಿ, ಆರ್'ಎಸ್ಎಸ್'ಗೆ ನಾನು ಹೆದರುವುದಿಲ್ಲ. ಪ್ರೀತಿ ಹಾಗೂ ಸಾಮರಸ್ಯದ ಮೇಲಿನ ನನ್ನ ನಂಬಿಕೆಯನ್ನು ನಾನು ಮುಂದುವರೆಸುತ್ತೇನೆ. ನೀವು ದ್ವೇಷವನ್ನು ಮುಂದುವರೆಸುವ ಕಡೆಯೇ ಅಂಟಿಕೊಂಡಿರಿ ಎಂದು ಹೇಳಿದ್ದಾರೆ.