ಚೆನ್ನೈ: ಚಲಿಸುವ ಕಾರಿನಲ್ಲಿ ಒಲಾ ಕ್ಯಾಬ್ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಭಾನುವಾರ ತಡರಾತ್ರಿ ಇಂಜಮ್ ಬಾಕಮ್ ನಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಿರುಕುಳಕ್ಕೆ ಒಳಗಾದ ಮಹಿಳೆ ಅಣ್ಣಾನಗರದ ಆಸ್ಪತ್ರೆಯೊಂದರಲ್ಲಿ ವೈದ್ಯಯಾಗಿದ್ದು, ನಿನ್ನೆ ರಾತ್ರಿ ಇಂಜಮ್ ಬಾಕಮ್ ನಲ್ಲಿರುವ ತಮ್ಮ ಸ್ನೇಹಿತರ ಮನೆಗೆ ತೆರಳಿದ್ದ ವೈದ್ಯ ವಾಪಸ್ ರಾತ್ರಿ ಕೆಲಸಕ್ಕೆ ಆಸ್ಪತ್ರೆಗೆ ಬರಲು ಒಲಾ ಕ್ಯಾಬ್ ಬುಕ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಕ್ಯಾಬ್ ಹತ್ತಿದ ಕೆಲವೇ ನಿಮಿಷಗಳ ನಂತರ ಅಮೈಧಿ ಕೊವಿಲ್ ನಲ್ಲಿ ಮತ್ತಿಬ್ಬರು ಹತ್ತಿಕೊಂಡರು. ಇದನ್ನು ಪ್ರಶ್ನಿಸಿದ್ದಕ್ಕೆ ಚಾಲಕ, ಇವರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ಸ್ವಲ್ಪ ದೂರದಲ್ಲಿ ಇಳಿದುಕೊಳ್ಳಲಿದ್ದಾರೆ ಎಂದು ಸಮಜಾಯಿಸಿ ನೀಡಿದ್ದ. ಆದರೆ ಇದಾದ ನಂತರ ಮೂವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವೈದ್ಯೆ ಆರೋಪಿಸಿದ್ದಾರೆ.
ಕಾರಿನ ಚಾಲಕ ವೆಂಕಟೇಶನ್ ಎಂದು ಗುರುತಿಸಲಾಗಿದ್ದು, ಮಾಹಿತಿಯನ್ನಾಧರಿಸಿ ಮೊದಲ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ನಂತರ ಆತನ ಸ್ನೇಹಿತರಾದ ಶಕ್ತಿವೇಲ್ ಮತ್ತು ಪಾಂಡಿಯನ್ನು ಬಂಧಿಸಿದ್ದಾರೆ.