ಕೋಝಿಕೋಡ್: ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ ಬಾಲಿವುಡ್ ನಟ ಸುರೇಶ್ ಒಬೆರಾಯ್ ಅವರು ಹೇಳಿದ್ದಾರೆ.
ದೇಶ ತೊರೆಯುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಾಕಿಸ್ತಾನ ಕಲಾವಿದರಿಗೆ ಬೆದರಿಕೆ ಹಾಕಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಕಲಾವಿದರು ಯಾವ ತಪ್ಪು ಮಾಡಿದ್ದಾರೆ? ಅವರನ್ನು ದೇಶದಿಂದ ಹೊರಹಾಕುವುದಕ್ಕೆ. ಪಾಕಿಸ್ತಾನ ಕಲಾವಿದರೇನು ಭಯೋತ್ಪಾದಕರಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರದ ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರರ ದಾಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು, ಭಾರತದಲ್ಲಿರುವ ಪಾಕಿಸ್ತಾನ ಕಲಾವಿದರು ಕೂಡಲೇ ದೇಶವನ್ನು ಬಿಟ್ಟು ಹೋಗುವಂತೆ ಕರೆ ನೀಡಿತ್ತು. ಅಲ್ಲದೆ, 48 ಗಂಟೆಗಳ ಗಡುವನ್ನೂ ನೀಡಿತ್ತು. ಈ ಬೆದರಿಕೆ ಕರೆಗೆ ಬಿ-ಟೌನ್ ನಿಂದ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.