ನವದೆಹಲಿ: ಭಯೋತ್ಪಾದನೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಚಾಟಿ ಏಟಿಗೆ ಪ್ರತಿಕ್ರಿಯೆ ನೀಡಲು ಪಾಕಿಸ್ತಾನ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಹೆಸರು ಬಹಿರಂಗಪಡಿಸದ ಕೆಲ ರಾಜತಾಂತ್ರಿಕರು ಮಾಧ್ಯಮವೊಂದಕ್ಕೆ ಹೇಳಿಕೆಗಳನ್ನು ನೀಡಿದ್ದಾರೆ.
ಪಾಕಿಸ್ತಾನದ ಜೊತೆಗೆ ಭಾರತ ಯುದ್ಧ ಮಾಡಿದ್ದೇ ಆದರೆ, ಅದರ ಆರ್ಥಿಕ ಸ್ಥಿತಿ ಕುಸಿಯಲಿದೆ. ಅಲ್ಲದೆ. ಜಾಗತಿಕವಾಗಿಯೂ ಭಾರತ ಪ್ರತ್ಯೇಕಗೊಳ್ಳುವಂತಾಗುತ್ತದೆ ಎಂದು ಪಾಕಿಸ್ತಾನದ ರಾಜತಾಂತ್ರಿಕರು ಹೇಳಿಕೊಂಡಿದ್ದಾರೆ.
ಈ ಕುರಿತಂತೆ ಡಾನ್ ವರದಿ ಮಾಡಿದ್ದು, ಪಾಕಿಸ್ತಾನದ ಜೊತೆಗೆ ಭಾರತ ಯುದ್ಧ ಮಾಡಿದ್ದೇ ಆದರೆ, ಅದರ ಆರ್ಥಿಕತೆ ಕುಸಿಯುತ್ತದೆ. ಹೀಗಾಗಿ ಭಾರತ ಎಂದಿಗೂ ಈ ರೀತಿಯ ಅಪಾಯಕರ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯಾವುದೇ ರೀತಿಯ ಯುದ್ಧ ನಡೆಯುವುದಿಲ್ಲ. ಪಾಕಿಸ್ತಾನಕ್ಕೆ ಯುದ್ಧ ಮಾಡುವ ಉದ್ದೇಶವಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಯುದ್ಧ ಮಾಡಿದ್ದೇ ಆದರೆ, ತನ್ನ ಆರ್ಥಿಕತೆ ಕುಸಿಯುತ್ತದೆ ಎಂಬುದನ್ನು ಭಾರತ ಕೂಡ ಅರಿಯಬೇಕಿದೆ.
ಉರಿ ಉಗ್ರ ದಾಳಿಯನ್ನು 1965 ಯುದ್ಧಕ್ಕೆ ಹೋಲಿಕೆ ಮಾಡುವ ಮೂಲಕ ಭಾರತ ಕೆಟ್ಟ ಉದಾಹರಣೆಗಳನ್ನು ನೀಡುತ್ತಿದೆ. ಇದರಿಂದ ಸಾಕಷ್ಟು ಜನರ ಮನಸ್ಸಿಗೆ ನೋವುಂಟಾಗುತ್ತದೆ. ಇದೇ ಹಾದಿಯಲ್ಲಿ ಭಾರತ ನಡೆದಿದ್ದೇ ಆದರೆ, ಜಾಗತಿಕ ಮಟ್ಟದಲ್ಲಿ ಭಾರತ ಪ್ರತ್ಯೇಕಗೊಳ್ಳಲಿದೆ ಎಂದು ಹೇಳಿದ್ದಾರೆಂದು ಡಾನ್ ತನ್ನ ವರದಿಯಲ್ಲಿ ತಿಳಿಸಿದೆ.