ನವದೆಹಲಿ: ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕಾಂಗ್ರೆಸ್ ಸಂಸದ ಶಾದಿ ಲಾಲ್ ಬಾತ್ರ ವಿರುದ್ಧ ಕೇಸು ದಾಖಲಿಸಿದ್ದಾರೆ.
ವಕೀಲೆಯೊಬ್ಬರು ನೀಡಿದ ದೂರಿನ ಮೇರೆಗೆ ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಶಾದಿ ಲಾಲ್ ಬಾತ್ರ ವಿರುದ್ಧ ದೆಹಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಸಂಸದರು ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆ ಎಂದು ವಕೀಲೆ ಆರೋಪಿಸಿದ್ದಾರೆ.
ಹರ್ಯಾಣ ಮೂಲದ ವಕೀಲೆ ತಮ್ಮ ಮೇಲೆ ಸಂಸದರು ಅತ್ಯಾಚಾರವೆಸಗಿದ್ದಾರೆ ಎಂದು ಕೇಸು ದಾಖಲಿಸಿದ್ದು ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
76 ವರ್ಷದ ಶಾದಿ ಲಾಲ್ ಬಾತ್ರಾ ಹರ್ಯಾಣದ ರಾಜ್ಯಸಭಾ ಸದಸ್ಯರು. ಅವರು ಕಾಂಗ್ರೆಸ್ ನ ಹಿರಿಯ ಸದಸ್ಯರಾಗಿದ್ದಾರೆ.ಕಳೆದ ಸೆಪ್ಟೆಂಬರ್ 24ರಂದು ಸಂಸದರು ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನನ್ನು ಅವರ ಮನೆಗೆ ಕರೆದಿದ್ದರು. ಅವರ ಮನೆಗೆ ಹೋದಾಗ ಪಾನೀಯದಲ್ಲಿ ಮತ್ತು ಬರಿಸುವ ವಸ್ತುವನ್ನು ಹಾಕಿ ಅತ್ಯಾಚಾರವೆಸಗಿದ್ದಾರೆ. ನಂತರ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ವಿಷಯ ಕುರಿತು ತನಿಖೆ ನಡೆಸುತ್ತಿದ್ದಾರೆ.