ಜೋಧಾಬಾಯಿ (ಸಾಂಕೇತಿಕ ಚಿತ್ರ)
ಪಣಜಿ: "ಅಕ್ಬರ್ ನ ಪತ್ನಿಯರ ಪೈಕಿ ಒಬ್ಬಳು ಎಂದು ಉಲ್ಲೇಖಿತವಾಗಿರುವ ರಾಣಿ ಜೋಧಾಬಾಯಿ ರಜಪೂತ ರಾಣಿ ಅಲ್ಲ, ಆಕೆ ಪೋರ್ಚುಗಲ್ ಮಹಿಳೆ" ಹೀಗಂತ ಹೇಳುವ ಮೂಲಕ ಗೋವಾ ಮೂಲದ ಲೇಖಕ ಲೂಯಿಸ್ ಡೆ ಆಸೀಸ್ ಹೊಸ ಚರ್ಚೆಯನ್ನು ಮುಂದಿಟ್ಟಿದ್ದಾರೆ.
ಪೋರ್ಚುಗೀಸ್ ಇಂಡಿಯಾ ಆಂಡ್ ಮೊಘಲ್ ರಿಲೇಷನ್ಸ್ 1510-1735 ಎಂಬ ಪುಸ್ತಕದಲ್ಲಿ ಲೂಯೀಸ್ ಜೋಧಾಬಾಯಿ ಅವರನ್ನು ರಜಪೂತ ರಾಣಿಯೇ ಅಲ್ಲ, ಆಕೆಯೊಬ್ಬ ಪೋರ್ಚುಗಲ್ ಮಹಿಳೆ ಯಾಗಿದ್ದು (ಡೊನಾ ಮಾರಿಯಾ ಮಸ್ಕರೇನ್ಹಸ್), ಸಂಚಾರದಲ್ಲಿದ್ದಾಗ ಆಕೆ ಹಾಗೂ ಆಕೆಯ ಸಹೋದರಿ ಜುಲೈನಾಳನ್ನು ಸೆರೆ ಹಿಡಿದು ಗುಜರಾತ್ ನ ಸುಲ್ತಾನ್ ಬಹದ್ದೂರ್ ಷಾ 1500 ರ ಸುಮಾರಿನಲ್ಲಿ ಅಕ್ಬರ್ ಗೆ ಉಡುಗೊರೆಯಾಗಿ ನೀಡಿರಬಹುದೆಂದು ಲೇಖಕ ಅಭಿಪ್ರಾಯಪಟ್ಟಿದ್ದಾರೆ.
ಡೊನಾ ಮಾರಿಯಾ ಮಸ್ಕರೇನ್ಹಸ್ ಅಕ್ಬರ್ ನ ಆಸ್ಥಾನಕ್ಕೆ ಬಂದಾಗ ಆಕೆಯೊಂದಿಗೆ ಅಕ್ಬರ್ ಗೆ ಪ್ರೇಮಾಂಕುರವಾಗುತ್ತದೆ. ಅದಾಗಲೇ ವಿವಾಹವಾಗಿದ್ದ ಅಕ್ಬರ್ ಗೆ 18 ವರ್ಷ ಹಾಗೂ ಡೊನಾ ಮಾರಿಯಾ ಮಸ್ಕರೇನ್ಹಸ್ ಗೆ 17 ವರ್ಷವಾಗಿದ್ದಿರಬಹುದು. ಈಕೆಯೇ ಜೋಧಾ ಆಗಿರಬಹುದು. ಆದರೆ ಮೊಘಲ್ ದೊರೆಗಳ ಆಸ್ಥಾನದಲ್ಲಿ ನಮ್ಮವರಿದ್ದರು ಎಂದು ಒಪ್ಪಿಕೊಳ್ಳುವುದಕ್ಕೆ ಪೋರ್ಚುಗೀಸ್ ಹಾಗೂ ಕ್ಯಾಥೋಲಿಕ್ ಗಳು ಇಷ್ಟಪಡುವುದಿಲ್ಲ. ಮತ್ತೊಂದೆಡೆ ಕ್ರುಸೇಡ್ ಪ್ರಾರಂಭವಾದಾಗಿನಿಂದಲೂ ಮೊಘಲ್ ಸಾಮ್ರಾಟರ ವಿರುದ್ಧ ಹೋರಾಡಿದ ಕ್ರೈಸ್ತ ಸಮುದಾಯದ ಮಹಿಳೆ ಮೊಘಲ್ ದೊರೆಯ ಪತ್ನಿಯಾಗಿದ್ದಳು ಎಂಬುದನ್ನು ಮೊಘಲರೂ ಒಪ್ಪುವುದಿಲ್ಲ. ಆದ್ದರಿಂದ ಬ್ರಿಟೀಷರು ಜೋಧಾಬಾಯಿ ಎಂಬ ಕಥೆ ಹೆಣೆದರು ಎಂದಿದ್ದಾರೆ ಗೋವಾ ಮೂಲದ ಲೇಖಕ ಲೂಯಿಸ್ ಡೆ ಆಸೀಸ್.
ಲೂಯಿಸ್ ಡೆ ಆಸೀಸ್ ಬರೆದಿರುವ ಪೋರ್ಚುಗೀಸ್ ಇಂಡಿಯಾ ಆಂಡ್ ಮೊಘಲ್ ರಿಲೇಷನ್ಸ್ 1510-1735 ಸುಮಾರು 173 ಪುಟಗಳ ಪುಸ್ತಕವಾಗಿದ್ದು ಬ್ರಾಡ್ ವೇ ಪಬ್ಲಿಷಿಂಗ್ ಹೌಸ್ ನಿಂದ ಪ್ರಕಟಗೊಂಡಿದೆ.