ನವದೆಹಲಿ: ಏಪ್ರಿಲ್ 30ರವರೆಗೆ ಸೇವಾ ಅವಧಿ ವಿಸ್ತರಣೆ ಪಡೆದಿರುವ ಗುಜರಾತ್ ಪೊಲೀಸ್ ಮಹಾ ನಿರ್ದೇಶಕ ಪಿಪಿ ಪಾಂಡೆ ಅವರ ರಾಜಿನಾಮೆಯನ್ನು ಸ್ವೀಕರಿಸಲು ಗುಜರಾತ್ ಸರ್ಕಾರಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪಾಂಡೆ ಅವರು ಕಳೆದ ಜನವರಿಯಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದು, ಗುಜರಾತ್ ಸರ್ಕಾರ ಅವರ ಸೇವಾ ಅವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿತ್ತು. ಇದನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಮತ್ತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಸ್ವತಃ ಪಾಂಡೆ ಅವರೆ ತಾವು ಸೇವೆಯಲ್ಲಿ ಮುಂದುವರೆಯಲು ಬಯಸದೆ ನಿವೃತ್ತಿಗೆ ಮನವಿ ಮಾಡಿ ಸರ್ಕಾರಕ್ಕೆ ಪತ್ರ ಬರೆದಿರುವುದರಿಂದ ಅವರಿಗೆ ಸೇವೆಯಿಂದ ಮುಕ್ತಗೊಳಿಸಿ ಎಂದು ಹೇಳಿದೆ.
ಇಶ್ರತ್ ಜಾಹನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಂಡೆ ಅವರಿಗೆ ಬಡ್ತಿ ನೀಡಿದ್ದನ್ನು ಮತ್ತು ಸೇವಾ ಅವಧಿ ವಿಸ್ತರಿಸಿದ್ದನ್ನು ವಿರೋಧಿಸಿ ಪಿಐಎಲ್ ಸಲ್ಲಿಸಲಾಗಿತ್ತು.