ಅಜ್ಮೇರ್: ಗೋಮಾಂಸ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದ ಅಜ್ಮೇರ್ ದರ್ಗಾದ ಧರ್ಮ ಗುರುವನ್ನು ಅವರ ಸಹೋದರ ಪ್ರಸ್ತುತ ಸ್ಥಾನದಿಂದ ವಜಾಗೊಳಿಸಿ, ಆತ ಮುಸ್ಲಿಂ ಅಲ್ಲ ಎಂದು ಬುಧವಾರ ಘೋಷಿಸಿದ್ದಾರೆ.
ದೇಶದಲ್ಲಿ ಕೋಮುಸೌಹಾರ್ದತೆ ಕಾಪಾಡಲು ಜಾನುವಾರುಗಳನ್ನು ವಧೆ ಮಾಡುವ ಎಲ್ಲ ಕಸಾಯಿಖಾನೆಗಳನ್ನು ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಬೇಕು ಎಂದು ನರೇಂದ್ರ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದ ಅಜ್ಮೇರ್ ದರ್ಗಾದ ಧರ್ಮ ಗುರು ಸೈಯದ್ ಝೈನುಲ್ ಅಬೇದಿನ್ ಅವರನ್ನು ಅವರ ಸಹೋದರ ಸೈಯದ್ ಅಲ್ಲಾದೀನ್ ಆಲಿಮಿ ಅವರು ದರ್ಗಾ ಮುಖ್ಯಸ್ಥನ ಸ್ಥಾನದಿಂದ ವಜಾಗೊಳಿಸಿದ್ದು, ತಾನೇ ನೂತನ ಧರ್ಮ ಗುರು ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ ತನ್ನ ಈ ನಿರ್ಧಾರವನ್ನು ಕುಟುಂಬ ಬೆಂಬಲಿಸಿರುವುದಾಗಿ ಹೇಳಿದ್ದಾರೆ.
ಗೋಮಾಂಸ ಮಾರಾಟ ಹಾಗೂ ಗೋಹತ್ಯೆಯನ್ನು ನಿಷೇಧಿಸಬೇಕೆಂಬ ಅಬೇದಿನ್ ಹೇಳಿಕೆಯು ಧರ್ಮ ನಿಂದನೆಯಾಗಿದ್ದು, ಈ ಕಾರಣಕ್ಕಾಗಿ ಆತ ಮುಸ್ಲಿಮನೇ ಅಲ್ಲ ಎಂದು ಸೈಯದ್ ಅಲ್ಲಾದೀನ್ ಆಲಿಮಿ ಹೇಳಿದ್ದಾನೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬೇದಿನ್ ಅವರು, ಆಲಿಮಿ ಕ್ರಮಕ್ಕೆ ಕಾನೂನು ಮಾನ್ಯತೆ ಇಲ್ಲ. ಏಕೆಂದರೆ ಇದು 1955ರ ದರ್ಗಾ ಖ್ವಾಜಾ ಸಾಹೇಬ್ ಕಾಯಿದೆಗೆ ಒಳಪಟ್ಟಿರುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಈ ವಿಷಯದಲ್ಲಿ ತಾನು ಕಾನೂನು ಅಭಿಪ್ರಾಯ ಪಡೆಯುವುದಾಗಿ ಹೇಳಿದ್ದಾರೆ.
ಅಜ್ಮೇರ್ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಅತ್ಯಂತ ಪ್ರಸಿದ್ಧ ದರ್ಗಾ ಆಗಿದ್ದು ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.