ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಯೋಧ ಚೇತನ್ ಅವರ ಆರೋಗ್ಯ ವಿಚಾರಿಸುತ್ತಿರುವ ಸಚಿವ ಕಿರಣ್ ರಿಜಿಜು
ದೆಹಲಿ: ಜಮ್ಮುವಿನ ಬಂಡಿಪೋರಾದಲ್ಲಿ ಗುಂಡಿನ ದಾಳಿ ವೇಳೆ ಬರೋಬ್ಬರಿ ಒಂಬತ್ತು ಗುಂಡುಗಳು ದೇಹದೊಳಗೆ ಹೊಕ್ಕಿದರೂ ಸಿಆರ್ ಪಿಎಫ್ ಕಮಾಂಡರ್ ಚೇತನ್ ಕುಮಾರ್ ಮತ್ತೆ ಬದುಕಿ ಬಂದಿದ್ದಾರೆ.
ಬಂಡಿಪೋರಾದಲ್ಲಿ ನಡೆದ ಉಗ್ರರೊಂದಿಗನ ಗುಂಡಿನ ಚಕಮಕಿ ವೇಳೆ ಚೇತನ್ ಅವರ ಎದೆಗೆ ಒಂಬತ್ತು ಗುಂಡುಗಳು ಹೊಕ್ಕಿದ್ದವು. ದಾಳಿ ನಡೆದ ದಿನದಂದು ಚೇತನ್ ಅವರು ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರಿದ್ದರು. ಸರಿ ಸುಮಾರು ಎರಡು ತಿಂಗಳ ಬಳಿಕ ಇದೀಗ ಕಮಾಂಡೋ ಚೇತನ್ ಅವರು ಮಾತನಾಡಲು ಆರಂಭಿಸಿದ್ದಾರೆ. ಅಲ್ಲದೆ, ಶೀಘ್ರದಲ್ಲಿ ಮತ್ತೆ ಕರ್ತವ್ಯಕ್ಕೆ ಇಂಗಿತ ವ್ಯಕ್ತಪಡಿಸಿದ್ದಾರೆ.
ಚೇತನ್ ಅವರಿಗೆ ಪ್ರಜ್ಞೆ ಬಂದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಏಮ್ಸ್ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಭೇಟಿ ನೀಡಿ ಚೇತನ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಚೇತನ್ ಅವರ ಮುಖದಲ್ಲಿದ್ದ ನಗು ನೋಡಿ ಬಹಳ ಸಂತೋಷವಾಯಿತು. ಅವರ ಜೀವನದ ಹೋರಾಟ ಇನ್ನಿತರೆ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಚೇತನ್ ಅವರು ಅರೋಗ್ಯ ಸುಧಾರಿಸುತ್ತಿದೆ. ನಿಜಕ್ಕೂ ಇದೊಂದು ಪವಾಡವೆಂದೇ ಹೇಳಬಹುದು. ಮೊದಲು ನಾನು ಏಮ್ಸ್ ವೈದ್ಯರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಶ್ರೀನಗರದಿಂದ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಚೇತನ್ ಅವರು ಇದ್ದ ಪರಿಸ್ಥಿತಿಯನ್ನು ನೆನೆದರೆ, ಇಂದು ಅವರು ಮಾತನಾಡುತ್ತಿರುವುದನ್ನು ನೋಡಿದರೆ ಪವಾಡೆವೆಂದೇ ಅನಿಸುತ್ತದೆ. ಅವರ ಧೈರ್ಯಕ್ಕೆ ನಾವು ಹೆಮ್ಮೆ ಪಡುತ್ತೇವೆ. ಚೇತನ್ ಧೈರ್ಯಶಾಲಿ ಅಧಿಕಾರಿ. ಅವರ ಹೋರಾಟ ಇನ್ನಿತರೆ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಚೇತನ್ ಅವರ ಮುಖದಲ್ಲಿ ನಗು ಕಾಣುತ್ತಿದ್ದು, ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಕಾತುರರಾಗಿದ್ದಾರೆ. ಇದು ಅವರಲ್ಲಿರುವ ಶಕ್ತಿ ಹಾಗೂ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.