ಶ್ರೀನಗರ: ಟೂರಿಸಂ ಅಥವಾ ಟೆರರಿಸಂ ನಡುವೆ ಆಯ್ಕೆ ಮಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಿ ಯುವಕರಿಗೆ ಕರೆ ನೀಡಿದ 3 ದಿನಗಳ ನಂತರ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುತ್ತಿರುವವರು ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಲ್ಲುತೂರಾಟ ಮಾಡುವವರು ಟೂರಿಸಂಗಾಗಿ ಜೀವ ನೀಡುತ್ತಿಲ್ಲ. ಬದಲಾಗಿ ಈ ದೇಶದ ಭವಿಷ್ಯವನ್ನು ಈ ಪ್ರದೇಶದ ಜನತೆಗೆ ಸ್ವೀಕಾರಾರ್ಹವಾಗುವಂತೆ ಮಾಡಲು ತಮ್ಮ ಜೀವ ನೀಡುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸೋನಾವಾರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಟನಲ್ ನ್ನು ಏ.2 ರಂದು ಉದ್ಘಾಟನೆ ಮಾಡಿದ್ದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಿ ಯುವಕರಿಗೆ ಟೂರಿಸಂ ಅಥವಾ ಟೆರರಿಸಂ ನಡುವೆ ಆಯ್ಕೆ ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಇದಕ್ಕೆ ಫಾರೂಕ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದು, ಟೂರಿಸಂ( ಪ್ರವಾಸೋದ್ಯಮ)ಜಮ್ಮು-ಕಾಶ್ಮೀರದ ಜೀವನಾಡಿ, ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಧಾನಿಗೆ ಹೇಳಬಯಸುತ್ತೇನೆ ಎಂದು ಹೇಳಿದ್ದಾರೆ.
ಆದರೆ ಕಲ್ಲು ತೂರಾಟ ಮಾಡುವವರಿಗೂ ಪ್ರವಾಸೋದ್ಯಮಕ್ಕೂ ಸಂಬಂಧವಿಲ್ಲ. ಕಲ್ಲು ತೂರಾಟ ಮಾಡುವವರು ದೇಶಕ್ಕಾಗಿ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಇದೇ ವೇಳೆ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಮಧ್ಯಸ್ಥಿಕೆ ವಹಿಸುವ ಅಮೆರಿಕಾದ ಪ್ರಸ್ತಾವನೆಯನ್ನು ಸ್ವಾಗತಿಸಿದ್ದು, ಅಮೆರಿಕಾದ ಮಧ್ಯಪ್ರವೇಶದ ಅಗತ್ಯವಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics