ದೇಶ

ಅಖಿಲೇಶ್ ಯಾದವ್ ಪಕ್ಷವನ್ನು ಮುಲಾಯಂ ಸಿಂಗ್ ಗೆ ಒಪ್ಪಿಸಲಿ: ಅಪರ್ಣಾ ಯಾದವ್

Srinivas Rao BV
ಲಖನೌ: ಸಮಾಜವಾದಿ ಪಕ್ಷದಲ್ಲಿ ಮತ್ತೊಂದು ಸುತ್ತಿನ ಕಲಹ ನಡೆಯುವ ಸೂಚನೆಗಳು ದಟ್ಟವಾಗಿದ್ದು, ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷವನ್ನು ಮುಲಾಯಂ ಸಿಂಗ್ ಯಾದವ್ ಅವರಿಗೆ ಒಪ್ಪಿಸಬೇಕೆಂದು ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಹೇಳಿದ್ದಾರೆ. 
ಪಕ್ಷದಲ್ಲಿ ಉಂಟಾಗಿದ್ದ ಭಿನಾಭಿಪ್ರಾಯ ಬಗೆಹರಿಯುವ ವಿಶ್ವಾಸವಿತ್ತು ಎಂದಿರುವ ಅಪರ್ಣಾ ಯಾದವ್, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಚುನಾವಣೆ ವೇಳೆಯಲ್ಲಿ ಮುಲಾಯಂ ಸಿಂಗ್ ಗೆ ನೀಡಿದ್ದ ಮಾತಿನ ಪ್ರಕಾರ ಈಗ ಪಕ್ಷವನ್ನು ಮುಲಾಯಂ ಸಿಂಗ್ ಯಾದವ್ ಗೆ ಒಪ್ಪಿಸಲಿ ಎಂದು ಸಲಹೆ ನೀಡಿದ್ದಾರೆ. 
ವಿಧಾನಸಭಾ ಚುನಾವಣೆ ಬಳಿಕ ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನವನ್ನು ಮುಲಾಯಂ ಸಿಂಗ್ ಅವರಿಗೆ ಬಿಟ್ಟುಕೊಡುವುದಾಗಿ ಅಖಿಲೇಶ್ ಯಾದವ್ ಜನವರಿ ತಿಂಗಳಲ್ಲಿ ಹೇಳಿದ್ದರು. ನುಡಿದಂತೆ ನಡೆಯುವ ವ್ಯಕ್ತಿ ಎಂದು ಅಖಿಲೇಶ್ ಯಾದವ್ ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ. ಆದ್ದರಿಂದ ಈಗ ಅವರು ನುಡಿದಂತೆ ನಡೆಯುವ ಸಂದರ್ಭ ಎದುರಾಗಿದೆ. ಸಮಾಜವಾದಿ ಪಕ್ಷವನ್ನು ಮುಲಾಯಂ ಸಿಂಗ್ ಗೆ ನೀಡಬೇಕಿದೆ ಎಂದು ಅಪರ್ಣಾ ಯಾದವ್ ಹೇಳಿದ್ದಾರೆ. 
ನನಗೆ ನನ್ನ ಕುಟುಂಬವೇ ಸರ್ವಸ್ವ. ನೇತಾಜಿ ಅವರ ಮಾತೇ ಅಂತಿಮವಾಗಿದ್ದು, ಮುಲಾಯಂ ಸಿಂಗ್ ಯಾದವ್ ಅವರನ್ನು ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ ಎಂದು ಅಪರ್ಣಾ ಯಾದವ್ ಹೇಳಿದ್ದಾರೆ. ಇದೇ ವೇಳೆ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿರುವ ಅಪರ್ಣಾ ಯಾದವ್, ಯೋಗಿ ಆದಿತ್ಯನಾಥ್ ಸಂತರಾಗಿದ್ದು ಸಮಸ್ತ ಉತ್ತರ ಪ್ರದೇಶವನ್ನು ತಮ್ಮ ಕುಟುಂಬದಂತೆ ಭಾವಿಸಿ ಅಭಿವೃದ್ಧಿಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
SCROLL FOR NEXT