ನವದೆಹಲಿ: ವಿಮಾನ ಪ್ರಯಾಣಕ್ಕೆ ನಿಷೇಧ ವಿಧಿಸಿದರೆ ಸಂಸದರು ತಮ್ಮ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಗುರುವಾರ ಹೇಳಿದ್ದಾರೆ.
ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ನಿಷೇಧ ಪ್ರಕರಣ ಇಂದು ಲೋಕಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಸಂಸತ್ ಹೊರಗೆ ಈ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಈ ಬಗ್ಗೆ ನಾನು ತೀರ್ಮಾನ ತೆಗೆದುಕೊಳ್ಳಲು ಮತ್ತು ಆದೇಶ ನೀಡಲು ಸಾಧ್ಯವಿಲ್ಲ. ಆಧರೆ ಪರಸ್ಪರ ಮಾತುಕತೆ ಮೂಲಕ ವಿವಾದವನ್ನು ಶೀಘ್ರ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸದರು ಕಲಾಪಕ್ಕೆ ಹಾಜರಾಗಬೇಕಿದೆ. ಹಲವು ಬಾರಿ ಶನಿವಾರ ಮತ್ತು ಭಾನುವಾರ ಸಂಸತ್ ಕಾಲಪಕ್ಕೆ ರಜೆ ಇರುತ್ತದೆ. ಈ ವೇಳೆ ಸಂಸದರು ದೂರದ ತಮ್ಮ ಸ್ವಕ್ಷೇತ್ರಗಳಿಗೆ ತೆರಳಿ ವಾಪಸ್ ರೈಲಿನಲ್ಲಿ ಬರಲು ಸಾಧ್ಯವಾಗುವುದಿಲ್ಲ. ಅವರಿಗೆ ವಿಮಾನ ಪ್ರಯಾಣದ ಅಗತ್ಯವಿದೆ ಎಂದಿದ್ದಾರೆ.
ಏರ್ ಇಂಡಿಯಾ ಸಿಬ್ಬಂದಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಿ ಅಥವಾ ಬೇರೆ ಕ್ರಮ ತೆಗೆದುಕೊಳ್ಳಲಿ. ಆದರೆ ವಿಮಾನ ಪ್ರಯಾಣ ನಿಷೇಧಕ್ಕೆ ಸಂಬಂಧಿಸಿದಂತೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಪೀಕರ್ ಹೇಳಿದ್ದಾರೆ.
ಈ ಮಧ್ಯೆ ಏಪ್ರಿಲ್ 10ರೊಳಗೆ ಗಾಯಕ್ವಾಡ್ ಮೇಲಿನ ನಿಷೇಧ ತೆರವುಗೊಳಿಸದಿದ್ದರೆ ಶಿವಸೇನೆ ಎನ್ ಡಿಎ ಸಭೆಯಲ್ಲಿ ಬಹಿಷ್ಕರಿಸಲಿದೆ ಎಂದು ಶಿವಸೇನಾದ ಸಂಜಯ್ ರೌತ್ ಅವರು ಹೇಳಿದ್ದಾರೆ. ಅಲ್ಲದೆ ವಿಮಾನದಲ್ಲಿ ಕ್ರಿಮಿನಲ್ ಗಳು, ಅತ್ಯಾಚಾರಿಗಳು ಮತ್ತು ಪ್ರತ್ಯೇಕವಾದಿಗಳು ಪ್ರಯಾಣಿಸಬೇಕಾದರೆ ಗಾಯಕ್ವಾಡ್ ಗೆ ಏಕೆ ಇಲ್ಲ? ಎಂದು ಪ್ರಶ್ನಿಸಿದ್ದಾರೆ.