ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿಯನ್ನು ಥಳಿಸಿ ವಿಮಾನಯಾನದಿಂದ ನಿಷೇಧಕ್ಕೆ ಒಳಗಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರು ಕ್ಷಮೆ ಕೇಳದ ಹೊರತು ವಿಮಾನಯಾನಕ್ಕೆ ಅವಕಾಶವಿಲ್ಲ ಎಂದು ಹೇಳಿರುವ ಏರ್ ಇಂಡಿಯಾ ಮತ್ತೆ ಅವರ ಟಿಕೆಟ್ ಅನ್ನು ರದ್ದುಗೊಳಿಸಿದೆ.
ಮುಂಬೈ ನಿಂದ ದೆಹಲಿಗೆ ತೆರಳಲು ಗಾಯಕ್ವಾಡ್ ಬುಕ್ ಮಾಡಿದ್ದ ಟಿಕೆಟ್ ಗಳನ್ನು ಏರ್ ಇಂಡಿಯಾ ಇಂದು ರದ್ದುಗೊಳಿಸಿದ್ದು, ಘಟನೆಯಿಂದ ಏರ್ ಇಂಡಿಯಾ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಸಿಬ್ಬಂದಿಯನ್ನು ಥಳಿಸಿದ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾ ಸಂಸ್ಥೆ ಮತ್ತು ಸಿಬ್ಬಂದಿಗಳಿಗೆ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದೆ.
ಕ್ಷಮೆ ಕೇಳದ ಹೊರತು ಗಾಯಕ್ವಾಡ್ ವಿಮಾನ ಪ್ರಯಾಣಕ್ಕೆ ಅನುಮತಿ ಬೇಡ: ಸಿಬ್ಬಂದಿ ಸಂಘಟನೆ ಒತ್ತಾಯ
ಏತನ್ಮಧ್ಯೆ ವಿಮಾನಯಾನ ಸಿಬ್ಬಂದಿಗಳ ಒಕ್ಕೂಟ ಎಐಸಿಸಿಎ ಏರ್ ಇಂಡಿಯಾ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದು, ಸಿಬ್ಬಂದಿಯನ್ನು ಅಮಾನವೀಯವಾಗಿ ಚಪ್ಪಲಿಯಿಂದ ಥಳಿಸಿದ ಸಂಸದ ರವೀಂದ್ರ ಗಾಯಕ್ವಾಡ್ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಡಬಾರದು ಎಂದು ಒತ್ತಾಯಿಸಿದೆ. ಅಂತೆಯೇ ರವೀಂದ್ರ ಗಾಯಕ್ವಾಡ್ ಅವರಿಗೆ ಅನುಮತಿ ನೀಡಿದ್ದೇ ಆದರೆ ಮುಂದೆ ಭವಿಷ್ಯದಲ್ಲೂ ಇಂತಹ ಘಟನೆಗಳು ಮರುಕಳಿಸಬಹುದು, ಹೀಗಾಗಿ ರವೀಂದ್ರ ಗಾಯಕ್ವಾಡ್ ಅವರಂತಹ ಪ್ರಯಾಣಿಕರು ವಿಮಾನದ ಸುರಕ್ಷತೆಗೆ ಧಕ್ಕೆತರಬಲ್ಲರು ಎಂದು ಸಿಬ್ಬಂದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಗಾಯಕ್ವಾಡ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಬೇಕಿದ್ದು, ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಠಿಣಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯನ್ನು ಒತ್ತಾಯಿಸಿದೆ.
ವಿವಾದಗಳ ಬಳಿಕ ಸಂಸದರಿಂದ "ವಿಷಾಧ"
ಇನ್ನು ಏರ್ ಇಂಡಿಯಾ ಸಿಬ್ಬಂದಿಯನ್ನು ಥಳಿಸಿ ವಿಮಾನಯಾನದಿಂದ ನಿಷೇಧಕ್ಕೆ ಒಳಗಾಗಿರುವ ರವೀಂದ್ರ ಗಾಯಕ್ವಾಡ್ ಪ್ರಕರಣ ಸಂಸತ್ ನಲ್ಲೂ ಚರ್ಚೆಯಾಗಿದ್ದು, ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಅಭಿಪ್ರಾಯದ ಬಳಿಕ ಸಂಸದ ರವೀಂದ್ರ ಗಾಯಕ್ವಾಡ್ ಪ್ರಕರಣ ಸಂಬಂಧ ವಿಷಾಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರಿಗೆ ಪತ್ರವೊಂದನ್ನು ಬರೆದಿರುವ ಗಾಯಕ್ವಾಡ್ ಅವರು, ತಮ್ಮ ಕಾರ್ಯದಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗಿದ್ದರೆ ತಾವು ವಿಷಾಧ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.