ಪಾಟ್ನಾ: ರಾಜಧಾನಿ ದೆಹಲಿ ಮತ್ತು ಪಾಟ್ನಾ ನಡುವೆ ಸಂಚರಿಸುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲಿಗೆ ನುಗ್ಗಿದ ದರೋಡೆಕೋರರು ಪ್ರಯಾಣಿಕರಿಂದ ನಗದು, ಚಿನ್ನಾಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಮುಂಜಾನೆ ಉತ್ತರಪ್ರದೇಶದ ಮುಘಲ್ ಸರಾಯಿ ಮತ್ತು ಬಿಹಾರದ ಬುಕ್ಸಾರ್ ರೈಲ್ವೆ ನಿಲ್ದಾಣಗಳ ನಡುವೆ ರಾಜಧಾನಿ ಎಕ್ಸ್ ಪ್ರೆಸ್ ಹಾದು ಹೋಗುತ್ತಿದ್ದಾಗ ದರೋಡೆಕೋರರು ರೈಲಿನ ಮೇಲೆ ದಾಳಿ ಮಾಡಿದ್ದು, ರೈಲಿನ ಎ4, ಬಿ7 ಮತ್ತು ಬಿ8 ಸಂಖ್ಯೆಯ ಬೋಗಿಯೊಳಗೆ ನುಗ್ಗಿ ದರೋಡೆ ನಡೆಸಿದ್ದಾರೆ. ಪ್ರಯಾಣಿಕರನ್ನು ಬೆದರಿಸಿ ಮತ್ತು ಥಳಿಸಿ ಚಿನ್ನಾಭರಣ, ನಗದು, ಲ್ಯಾಪ್ ಟಾಪ್, ಮೊಬೈಲ್ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಈ ಘಟನೆ ಬಗ್ಗೆ ಪಾಟ್ನಾದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‍ಪಿ) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂದಾಜು ರು.20 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ವಸ್ತುಗಳು ದರೋಡೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಗಿಲು ತೆರೆದು ಸಿಬ್ಬಂದಿಯಿಂದಲೇ ಕೃತ್ಯಕ್ಕೆ ನೆರವು ಆರೋಪ!
ಇನ್ನು ಕೆಲ ರೈಲ್ವೇ ಸಿಬ್ಬಂದಿಗಳು ಬೇಕೆಂದೇ ಬಾಗಿಲು ತೆರೆಯುವ ಮೂಲಕ ದರೋಡೆಕೋರರು ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಪ್ರಯಾಣಿಕರು ಆರೋಪಿಸಿರುವಂತೆ ಕೆಲವೊಂದು ರೈಲ್ವೆ ಬೋಗಿಗಳ ಬಾಗಿಲು ತೆರೆದಿದ್ದುದರಿಂದ ದರೋಡೆಕೋರರು ಈ ಬೋಗಿಗಳಿಗೆ ನುಗ್ಗಿದ್ದರು. ಬೋಗಿಗಳ ಬಾಗಿಲು ತೆರೆದಿಡುವ ಮೂಲಕ ರೈಲ್ವೆ ಸಿಬ್ಬಂದಿಗಳು ದರೋಡೆಕೋರರರಿಗೆ ಸಹಾಯ ಮಾಡಿದ್ದಾರೆ. ಈ ಕೃತ್ಯದಲ್ಲಿ ರೈಲ್ವೆ ಸಿಬ್ಬಂದಿಗಳ ಕೈವಾಡವೂ ಇದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೈಲ್ವೇ ಸಚಿವರಿಂದ ತನಿಖೆಗೆ ಆದೇಶ
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.