ದೇಶ

ಚುನಾವಣೆ ವೇಳೆ ಭಾರಿ ಹಿಂಸೆ: 8 ಬಲಿ, ಶ್ರೀನಗರದಲ್ಲಿ ಕೇವಲ ಶೇ.7.14 ರಷ್ಟು ಮತದಾನ

Manjula VN
ಶ್ರೀನಗರ: ಜಮ್ಮು-ಕಾಶ್ಮೀರದ  ಶ್ರೀನಗರ ಲೋಕಸಭಾಕ್ಷೇತ್ರದ ಉಪ ಚುನಾವಣೆ ಮತದಾನದ ವೇಳೆ ಭಾರೀ ಹಿಂಸಾಚಾರ ಸಂಭವಿಸಿ ಪರಿಣಾಮ ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 8 ಮಂದಿ ಬಲಿಯಾಗಿದ್ದು, ಹಲವು ಜನರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆಸಿದೆ. 
ಹಿಂಸಾಚಾರ ಹಿನ್ನಲೆಯಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಶೇ.7.14ರಷ್ಟು ಮಾತ್ರ ಮತದಾನವಾಗಿದೆ. ಇದು ಸಾರ್ವಕಾಲಿಕ ಕನಿಷ್ಟ ಮತದಾನವೆಂದೇ ಹೇಳಲಾಗುತ್ತಿದೆ. 
1999ರಲ್ಲಿ ಇಲ್ಲಿ ಶೇ.11.93ರಷ್ಟು ಮತದಾನವಾಗಿದ್ದು, ಈ ವರೆಗಿನ ಕನಿಷ್ಠವಾಗಿತ್ತು. ಕ್ಷೇತ್ರದ ಮತದಾರರ ಸಂಖ್ಯೆ 12.61 ಲಕ್ಷವಾಗಿದೆ. 
ಬದ್ಗಾಂ ಜಿಲ್ಲೆಯ ಚರಾರ್ ಎ ಷರೀಫ್, ಚಾದೂರಾ ಮತ್ತು ಬೀರ್ವಾದಲ್ಲಿ ಇಬ್ಬರು, ಗಂದರ್ ಬಾಲ್ ಮತ್ತು ಮಗಾಂಪಟ್ಟಣದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಹಿಂಸಾಚಾರ ಕಾರಣ ಶೇ.70 ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಲು ಬಂದಿರಲಿಲ್ಲ. ಉದ್ರಿಕ್ತ ಗುಂಪು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದೂ ಇಲ್ಲದೆ, ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಮತಗಟ್ಟೆಗಳಇಗೆ ಬೆಂಕಿ ಹಚ್ಚಿದ್ದರಿಂದ ಸೇನೆಯ ನೆರವನ್ನು ಪಡೆದುಕೊಳ್ಳಲಾಗಿತ್ತು. 
ಕಲ್ಲುತೂರಾಟಗಾರರ ನಿಯಂತ್ರಣಕ್ಕೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದರಿಂದಾಗಿ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 100 ಭದ್ರತಾ ಸಿಬ್ಬಂದಿಗಳೂ ಕೂಡ ಗಾಯಗೊಂಡಿದ್ದಾರೆ. 
100 ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವ ಸಾಧ್ಯತೆಗಳಿವೆ ಎಂದು ಚುನಾವಣಾಧಿಕಾರಿಗಳು ಮಾಹಿತಿನೀಡಿದ್ದಾರೆ. ಏ.12 ರಂದು ಅನಂತ ನಾಗ್ ಜಿಲ್ಲೆಯಲ್ಲಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು. ಈ ಚುನಾವಣೆ ಸವಾಲಿನ ಕೆಲಸವಾಗಲಿದೆ ಎಂದು ತಿಳಿಸಿದ್ದಾರೆ. 
ವದಂತಿಗಳ ಹರಡಬಾರದೆಂಬ ಕಾರಣಕ್ಕೆ ಕಾಶ್ಮೀರದಲ್ಲಿ ಏ.12ರ ಅನಂತನಾಗ್ ಚುನಾವಣೆ ಅಂತ್ಯಗೊಳ್ಳುವವರೆಗೂ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 
SCROLL FOR NEXT