ರಾಮಪುರ (ಉತ್ತರಪ್ರದೇಶ): ಗೋವರ್ಧನ ಮಠದ ಶಂಕರಾಚಾರ್ಯ ಪೀಠದ ಸ್ವಾಮಿ ಅಧೋಕ್ಷಜಾನಂದ ಮಹಾರಾಜ್ ಅವರು ದಾನವಾಗಿ ನೀಡಿದ್ದ ಹಸುವನ್ನು ಸಮಾಜವಾದಿ ನಾಯಕ ಅಜಂಖಾನ್ ಅವರು ಶ್ರೀಗಳಿಗೇ ವಾಪಸ್ ನೀಡಿದ್ದಾರೆ.
ಶ್ರೀಗಳು ನೀಡಿದ್ದ ಹಸುವನ್ನು ಮರಳಿ ಹಿಂದಕ್ಕೆ ನೀಡಿರುವ ಅಜಂಖಾನ್ ಅವರು ಶ್ರೀಗಳಿಗೆ ಪತ್ರವೊಂದನ್ನು ಬರೆದಿದ್ದು, ದೇಶದಲ್ಲಿಂದು ಮುಸ್ಲಿಮರು ಅಸುರಕ್ಷಿತ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ನನಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಬಸಿ ಬಳಿಯುವ ಸಲುವಾಗಿ ಗೋರಕ್ಷಕರೇ ಹಸುವನ್ನು ಹತ್ಯೆ ಮಾಡಲು ಯತ್ನಿಸಬಹುದೆಂದು ಹೇಳಿಕೊಂಡಿದ್ದಾರೆ.
ದೇಶದಲ್ಲಿ ಮುಸ್ಲಿಮರ ವಿರುದ್ಧ ಷಡ್ಯಂತ್ರಗಳನ್ನು ರಚಿಸಲಾಗುತ್ತಿದ್ದು, ಗುಲಾಮರಿಗಿಂತಲೂ ಕೆಟ್ಟ ಪರಿಸ್ಥಿತಿಯನ್ನು ಮುಸ್ಲಿಮರು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿದೆ. ವಿವಿಐಪಿಗಳು ಗೋಮಾಂಸ ತಿನ್ನಲು ಅನುಮತಿ ನೀಡಲಾಗುತ್ತಿದೆ. ಆದರೆ, ಸಾಮಾನ್ಯ ಜನತೆ ಮಾತ್ರ ಅನಗತ್ಯವಾಗಿ ಸಮಸ್ಯೆನ್ನು ಎದುರಿಸುತ್ತಿದ್ದಾರೆ. ನನ್ನ ಬಳಿ ಇದ್ದಾಗಿನಿಂದಲೂ ಹಸುವನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದೇನೆ. ಹಸುವಿನ ಭದ್ರತೆ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ಹಸುವನ್ನು ಮತ್ತೆ ನಿಮಗೆ ವಾಪಸ್ ನೀಡುತ್ತಿದ್ದೇನೆಂದು ತಿಳಿಸಿದ್ದಾರೆ.