ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ಚುನಾವಣಾ ಆಯೋಗ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದು, ದುರ್ಯೋಧನ ಬಿಜೆಪಿ ಗೆಲವು ಸಾಧಿಸಬೇಕೆಂದು ಬಯಸಿದೆ. ಹೀಗಾಗಿಯೇ ಬಿಜೆಪಿಗೆ ಸಹಾಯವನ್ನು ಮಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಆರೋಪಿಸಿದ್ದಾರೆ.
ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಗೋಲ್ ಮಾಲ್ ಕುರಿತಂತೆ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿರುವ ಅವರು, ಚುನಾವಣಾ ಆಯೋಗ ಧೃತರಾಷ್ಟ್ರನಂತೆ ವರ್ತಿಸುತ್ತಿದೆ. ಮೋಸವಾದರೂ ಸರಿ, ವಂಚನೆಯಾದರೂ ಸರಿ ಮಗನೇ ಗೆಲವು ಸಾಧಿಸಬೇಕೆಂದು ಧೃತರಾಷ್ಟ್ರ ಬಯಸುತ್ತಿದ್ದ. ಇದೀಗ ಚುನಾವಣಾ ಆಯೋಗ ಕೂಡ ಧೃತರಾಷ್ಟ್ರನಂತೆಯೇ ವರ್ತಿಸತೊಡಗಿದೆ ಎಂದು ಹೇಳಿದ್ದಾರೆ.
ಗೋಲ್ ಮಾಲ್ ಆಗಿದ್ದ ಕೆಲ ಇವಿಎಂಗಳನ್ನೇ ರಾಜಸ್ತಾನದ ಧೋಲ್ಪುರ್ ಉಪ ಚುನಾವಣೆಯಲ್ಲಿ ಬಳಸಲಾಗಿದೆ. 18 ಯಂತ್ರಗಳು ದೊರಕಿದ್ದು, ಇದರಲ್ಲಿ ಯಾವುದೇ ಬಟನ್ ಒತ್ತಿದರೂ ಅದು ಬಿಜೆಪಿಗೆ ಮತ ಹೋಗುತ್ತದೆ. ಭಿಂದ್ ನಲ್ಲಿಯೂ ಇಂತಹದ್ದೇ ಒಂದು ಯಂತ್ರ ದೊರಕಿತ್ತು. ನಿನ್ನೆ ಧೋಲ್ಪುರ್ ನಲ್ಲಿಯೂ ಗೋಲ್ ಮಾಲ್ ಆಗಿದ್ದ ಮತ ಯಂತ್ರ ದೊರಕಿತ್ತು. ಈ ವರೆಗೂ ಇದೇ ರೀತಿಯ 18 ಮತಯಂತ್ರಗಳು ದೊರಕಿವೆ.
ಮತ ಯಂತ್ರಗಳಲ್ಲಿ ದೋಷಗಳು ಕಂಡುಬಂದಿದ್ದೇ ಆದರೆ, ಕೆಲ ಯಂತ್ರಗಳು ಕಾಂಗ್ರೆಸ್'ಗೆ, ಕೆಲ ಯಂತ್ರಗಳು ಆಪ್'ಗ ಹಾಗೂ ಕೆಲ ಯಂತ್ರಗಳು ಬಿಜೆಪಿಗೆ ಮತ ಹೋಗಬೇಕು. ಆದರೆ, ಎಲ್ಲಾ ಯಂತ್ರಗಳಲ್ಲೂ ಬಿಜೆಪಿ ಮಾತ್ರ ಮತ ಹೇಗೆ ಹೋಗುತ್ತವೆ? ಇದರ ಅರ್ಥ ಸಾಫ್ಟ್ ವೇರ್ ಗಳು ಬದಲಾಗಿವೆ ಎಂದು. ಮತ ಯಂತ್ರಗಳಲ್ಲಿ ಕೋಡ್ ಹಾಗೂ ಪ್ರೋಗ್ರಾಮಿಂಗ್ ಗಳು ಬದಲಾಗಿದೆ. ಇದನ್ನು ಯಾವಾಗ ಬದಲು ಮಾಡಲಾಗಿದೆ? ಇಷ್ಟೆಲ್ಲಾ ಆದರೂ ಆಯೋಗ ಮಾತ್ರ ತನಿಖೆ ನಡೆಸಲು ಸಿದ್ಧವಿಲ್ಲ.
ಬಿಜೆಪಿ ಗೆಲುವು ಸಾಧಿಸಬೇಕೆಂದು ಚುನಾವಣಾ ಆಯೋಗ ಬಯಸಿರುವುದೇ ಆದರೆ, ಆಯೋಗ ಚುನಾವಣೆಯನ್ನೇಕೆ ನಡೆಸಬೇಕು. ಬಿಜೆಪಿಗೆ ಗೆಲವು ಘೋಷಿಸಲಿ. ಸ್ವತಂತ್ರ ಹಾಗೂ ನ್ಯಾಯಯುತವಾಗಿ ಚುನಾವಣೆಯನ್ನು ನಡೆಸುವುದರ ಬಗ್ಗೆ ಆಯೋಗವೇ ಆಸಕ್ತಿಯನ್ನು ಕಳೆದುಕೊಂಡಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವುದಷ್ಟೇ ಚುನಾವಣಾ ಆಯೋಗದ ಗುರಿ ಎಂಬಂತೆ ಕಾಣುತ್ತಿದೆ ಎಂದಿದ್ದಾರೆ.
ದೆಹಲಿ ಪುರಸಭಾ ಚುನಾವಣೆಗೂ ರಾಜಸ್ತಾನ ರಾಜ್ಯದಿಂದಲೇ ಇವಿಎಂಗಳು ಬರುತ್ತಿವೆ. ರಾಜಸ್ತಾನದಿಂದಲೇ ಮತ ಯಂತ್ರಗಳೇಕೆ ಬರುತ್ತಿವೆ? ದೆಹಲಿಯ ಮತ ಯಂತ್ರಗಳನ್ನೇಕೆ ರದ್ದು ಮಾಡಲಾಗಿದೆ? ರಾಜಸ್ತಾನದಿಂದ ಬರುತ್ತಿರುವ ಎಲ್ಲಾ ಮತಯಂತ್ರಗಳನ್ನೂ ಗೋಲ್ ಮಾಲ್ ಮಾಡಲಾಗಿದೆ. ಚುನಾವಣಾ ಆಯೋಗ ಹಾಗೂ ಬಿಜೆಪಿಯ ಈ ಆಟವನ್ನು ಭಾರತದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಬಿಜೆಪಿಯವರು ಸಂವಿಧಾನದೊಂದಿಗೆ ಆಟವನ್ನು ಆಡುತ್ತಿದ್ದಾರೆಂದು ಹೇಳಿದ್ದಾರೆ.