ದೇಶ

ಚೆನ್ನೈ: ಆರ್ ಕೆ ನಗರ ಉಪ ಚುನಾವಣೆ ರದ್ದು

Srinivasamurthy VN

ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಮಾಜಿ ಸಿಎಂ ಜೆ ಜಯಲಲಿತಾ ಅವರ ಕ್ಷೇತ್ರ ಆರ್ ಕೆ ನಗರದಲ್ಲಿ ನಡೆಯಬೇಕಿದ್ದ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಭಾನುವಾರ ರದ್ದುಗೊಳಿಸಿದೆ.

ಆರ್ ಕೆ ನಗರದಲ್ಲಿನ ಮತದಾರರಿಗೆ ಮತ ಹಾಕಲು ವ್ಯಾಪಕ ಹಣ ಹಂಚಲಾಗಿದೆ ಎಂಬ ಆರೋಪದ ಮೇರೆಗೆ ಚುನಾವಣಾ ಆಯೋಗ ಈ ಕಠಿಣ ಕ್ರಮವನ್ನು ಕೈಗೊಂಡಿದೆ. ಇದೇ ಏಪ್ರಿಲ್ 12ರಂದು ನಡೆಯಬೇಕಿದ್ದ ಚುನಾವಣೆಗಾಗಿ   ಅಭ್ಯರ್ಥಿಗಳು ಮತದಾರರಿಗೆ ವ್ಯಾಪಕ ಹಣದ ಆಮಿಷ ಒಡ್ಡಿದ್ದಾರೆ. ಪ್ರತೀ ಓಟಿಗೆ ಬರೊಬ್ಬರಿ 4 ಸಾವಿರ ರುಗಳಂತೆ ಹಣ ಹಂಚಿಕೆ ಮಾಡಿದ್ದು, ಈ ರೀತಿ ಸುಮಾರು 2.24 ಲಕ್ಷ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ  ಗಂಭೀರ ಆರೋಪ ಕೇಳಿ ಬಂದಿದೆ.

ತಮಿಳುನಾಡಿನ ಮಾಜಿ ಮುಖ್ಯ​ಮಂತ್ರಿ ಜೆ. ಜಯಲಲಿತಾ ಅವರ ನಿಧನದಿಂದಾಗಿ ಚೆನ್ನೈನ ಆರ್‌.ಕೆ. ನಗರ ವಿಧಾನಸಭಾ ಕ್ಷೇತ್ರ  ತೆರ​ವಾ​ಗಿತ್ತು. ಈ ಹಿನ್ನಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಹಣದ  ಹೊಳೆ ಹರಿದ ಕಾರಣ ಉಪಚುನಾವಣೆಯನ್ನೇ ಚುನಾ​ವಣಾ ಆಯೋಗ ಭಾನುವಾರ ರದ್ದುಪಡಿಸಿ ಆದೇಶ ಹೊರಡಿಸಿದೆ. ಮೂಲಗಳ ಪ್ರಕಾರ ಪ್ರತಿ ಮತದಾರರಿಗೂ ಅಣ್ಣಾಡಿ​ಎಂಕೆಯ ಆಡಳಿತಾರೂಢ (ಶಶಿಕಲಾ) ಬಣ 4 ಸಾವಿರ ರು.  ಹಂಚಿದೆ ಎಂಬ ಮಾಹಿತಿ ಆದಾಯ ತೆರಿಗೆ ದಾಳಿ ವೇಳೆ ಖಚಿತಪಟ್ಟಿತ್ತು. ತಮಿಳುನಾಡು ಚುನಾವಣಾ ಆಧಿಕಾರಿಗಳ ಜತೆ ಹಲವು ಸುತ್ತಿನ ಸಭೆಯ ಬಳಿಕ ಆಯೋಗ ಏಪ್ರಿಲ್ 12ರಂದು ನಿಗದಿಯಾಗಿರುವ ಚುನಾ​ವಣೆಯನ್ನು  ರದ್ದುಗೊಳಿಸುವ ನಿರ್ಧಾರ ಕೈಗೊಂ​ಡಿದೆ. ಜನರು ಆಸೆ, ಆಮಿಷಗಳಿಂದ ದೂರವಾಗಿ ಪಾರದರ್ಶಕ ವಾತಾವರಣ ನಿರ್ಮಾಣವಾದ ಬಳಿಕ ಮತ್ತೊಮ್ಮೆ ಚುನಾವಣೆ ನಡೆಸಲಾಗುವುದು ಎಂದು ಆಯೋಗ ತಿಳಿಸಿದೆ.

ಈ ಹಿಂದೆ ಹಣ ಬಲದಿಂದ ಚುನಾವಣೆ ಎದುರಿಸಿದ ಕಾರಣಕ್ಕಾಗಿ ಅವರ್ಕುರುಚಿ ಮತ್ತು ತಂಜಾವೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಆಯೋಗ ರದ್ದುಗೊಳಿತ್ತು. ಈಗ ಮತ್ತೊಮ್ಮೆ ತಮಿಳುನಾಡಿನಲ್ಲಿ ಇದೇ ಕಾರಣಕ್ಕಾಗಿ  ಚುನಾವಣೆಯನ್ನು ಆಯೋಗ ರದ್ದುಗೊಳಿಸಿದೆ.

SCROLL FOR NEXT