ನವದೆಹಲಿ: ಭಾರತದಲ್ಲಿ ವರ್ಣ ಭೇದ ನೀತಿ ಇಲ್ಲ, ಕಪ್ಪುವರ್ಣೀಯರಾದ ದಕ್ಷಿಣ ಭಾರತದವರೊಂದಿಗೆ ಉತ್ತರ ಭಾರತದ ಜನತೆ ಸಹಬಾಳ್ವೆ ನಡೆಸುತ್ತಿದ್ದಾರೆ ಎಂಬ ತರುಣ್ ವಿಜಯ್ ಅವರ ಹೇಳಿಕೆ ಬಗ್ಗೆ ಲೋಕಸಭೆಯಲ್ಲಿ ಗದ್ದಲ ಉಂಟಾಗಿದೆ.
ಪದೇ ಪದೇ ಗದ್ದಲ ಉಂಟಾದ ಕಾರಣ ಸ್ಪೀಕರ್ ಸುಮಿತ್ರಾ ಮಹಾಜನ್ ಸದನವನ್ನು ಕೆಲಕಾಲ ಮುಂದೂಡಿದ್ದರು. ಲೋಕಸಭೆಯ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸಂಸದ, ಕಾಂಗ್ರೆಸ್ ನ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತರುಣ್ ವಿಜಯ್ ಅವರ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ನೀಡಬೇಕು ಎಂಬ ಮನವಿ ಮಾಡಿದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ತಿರಸ್ಕರಿಸಿದ ಸುಮಿತ್ರಾ ಮಹಾಜನ್ ತರುಣ್ ವಿಜಯ್ ಅವರ ಹೇಳಿಕೆ ಬಗ್ಗೆ ಶೂನ್ಯ ವೇಳೆಯಲ್ಲಿಯೂ ಪ್ರಸ್ತಾಪ ಮಾಡಬಹುದು ಎಂದು ಹೇಳಿದ್ದರು.
ಸ್ಪೀಕರ್ ಸುಮಿತ್ರಾ ಮಹಾಜನ್ ಅನುಮತಿ ನಿರಾಕರಿಸಿದ್ದರಿಂದ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಕೆಲ ಕಾಲ ಮುಂದೂಡಿದ್ದರು.