ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ತಮಿಳುನಾಡು ಮಾಜಿ ಸಿಎಂ ಜೆ ಜಯಲಲಿತಾ ಅವರ ಕ್ಷೇತ್ರ ಆರ್ ಕೆ ನಗರದಲ್ಲಿ ನಡೆಯಬೇಕಿದ್ದ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ರದ್ದು ಮಾಡಿರುವ ಹಿನ್ನಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಸೋಮವಾರ ಕಿಡಿಕಾರಿದ್ದಾರೆ.
ಆರ್.ಕೆ. ನಗರ ಉಪ ಚುನಾವಣೆ ರದ್ದುಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರೂ.500 ಹಾಗೂ 1000 ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಕಪ್ಪುಹಣ ಅಂತ್ಯಗೊಳ್ಳಲಿದೆ ಎಂದು ಮೋದಿ ಸರ್ಕಾರ ಹೇಳಿತ್ತು. ಆರ್.ಕೆ.ನಗರದಲ್ಲಿ ಹಂಚಿದ್ದು, ಕಾನೂನು ಬದ್ಧ ಹಣವೇ ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 12ರಂದು ನಡೆಯಬೇಕಿದ್ದ ಚುನಾವಣೆಗಾಗಿ ಅಭ್ಯರ್ಥಿಗಳು ಮತದಾರರಿಗೆ ವ್ಯಾಪಕ ಹಣದ ಆಮಿಷ ಒಡ್ಡಿದ್ದಾರೆ. ಪ್ರತೀ ಓಟಿಗೆ ಬರೊಬ್ಬರಿ 4 ಸಾವಿರ ರುಗಳಂತೆ ಹಣ ಹಂಚಿಕೆ ಮಾಡಿದ್ದು, ಈ ರೀತಿ ಸುಮಾರು 2.24 ಲಕ್ಷ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಂಡು ಉಪಚುನಾವಣೆಯನ್ನೇ ರದ್ದುಗೊಳಿಸಿತ್ತು.