ನವದೆಹಲಿ: ಹಿಂದೆಂದಿಗಿಂತಲೂ ಪ್ರಸ್ತುತ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧ ಹೆಚ್ಚು ವೃದ್ದಿಯಾಗಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಪ್ರಮಾಣ ಶೇ.17ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಅವೇರ್ನೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ್ ಅವರು, ಹಿಂದೆಂದಿಗಿಂತಲೂ ಈಗ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧ ಸಾಕಷ್ಟು ವೃದ್ಧಿಯಾಗಿದ್ದು, ಎರಡೂ ದೇಶಗಳ ವಾಣಿಜ್ಯ ಒಪ್ಪಂದಗಳಲ್ಲಿ ಶೇ.17ರಷ್ಟು ವೃದ್ದಿಯಾಗಿದೆ. ಇದು ಭಾರತ-ಬಾಂಗ್ಲಾದೇಶ ಸೌಹಾರ್ಧ ಸಂಬಂಧಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
"ಭಾರತ-ಬಾಂಗ್ಲಾದೇಶ ನಡುವೆ ಸುಮಾರು 6.5 ಬಿಲಿಯನ್ ಮೌಲ್ಯದ ವಾಣಿಜ್ಯ ಒಪ್ಪಂದವಾಗಿದ್ದು, ಭಾರತದ ನುಮಾಲಿಘಡ್ ನಿಂದ ಬಾಂಗ್ಲಾದೇಶದ ಪರ್ಬಾತಿಪುರದವರೆಗೂ ಪೈಪ್ ಲೈನ್ ಅಳವಡಿಸಿ ಡೀಸೆಲ್ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಅಂತೆಯೇ ಬಾಂಗ್ಲಾದೇಶಕ್ಕೆ ಅತ್ಯಾವಶ್ಯಕವಾಗಿರುವ ದ್ರವರೂಪದ ನೈಸರ್ಗಿಕ ಅನಿಲ ಪೂರೈಕೆಗೂ ಭಾರತ ಬದ್ಧವಾಗಿದ್ದು, ಈಗಗಾಲೇ ಇದರ ಕಾಮಗಾರಿ ಆರಂಭವಾಗಿದೆ. ಅಂತೆಯೇ ಭಾರತದ ಒನ್ ಜಿಸಿ ವಿದೇಶ್ ಸಂಸ್ಥೆ ಚಿತ್ತಗಾಂಗ್ ಬಳಿಯ ಎರಡು ಕರಾವಳಿ ತೀರದಲ್ಲಿ ಪರಿಶೋಧನೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.