ಚೆನ್ನೈ: ಇತ್ತೀಚೆಗಷ್ಟೇ ಏಕಾ ಏಕಿ ಕುಸಿಯುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಚೆನ್ನೈನ ಅಣ್ಣಾ ಸಾಲೈ ರಸ್ತೆ ಇದೀಗ ಮತ್ತೆ ಸುದ್ದಿಯಲ್ಲಿದ್ದು, ರಸ್ತೆಯಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡಿದೆ.
ಮೊನ್ನೆಯಷ್ಟೇ ಇದೇ ಅಣ್ಣಾ ಸಾಲೈ ರಸ್ತೆ ಕುಸಿದು ಅದರಲ್ಲಿ ಬಸ್, ಕಾರು ಸಿಲುಕಿಕೊಂಡಿತ್ತು. ಅದಾಗಿ ಎರಡೇ ದಿನಕ್ಕೆ ರಸ್ತೆಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಅಣ್ಣಾ ಸಲೈ ರಸ್ತೆಯ ಸುಮಾರು ಆರು ಮೀಟರ್ ವಿಸ್ತೀರ್ಣದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಬೇರೆ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಪ್ರಸ್ತುತ ಬಿರುಕು ಬಿಟ್ಟಿರುವ ರಸ್ತೆ ಭಾಗದಲ್ಲಿನ ಸಂಚಾರ ನಿಷೇಧಿಸಲಾಗಿದೆ.
ವಿಚಾರ ತಿಳಿದ ಕೂಡಲೇ ಮೆಟ್ರೋ ರೈಲು ಕಾಮಗಾರಿ ಎಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಿದ್ದು, ರಸ್ತೆಯಡಿಯಲ್ಲಿನ ಮಣ್ಣು ತೆವಾಂಶದಿಂದ ಸಡಿಲಗೊಂಡಿರುವುದೇ ರಸ್ತೆ ಬಿರುಕು ಬಿಡಲು ಕಾರಣ ಎಂದು ಹೇಳಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೆಟ್ರೋ ಇಂಜಿನಿಯರ್ ಗಳು ಮೆಟ್ರೋ ಕಾಮಗಾರಿಗೂ ರಸ್ತೆ ಬಿರುಕು ಬಿಡಲು ಯಾವುದೇ ರೀತಿಯ ಸಂಬಂಧವಿಲ್ಲ. ರಸ್ತೆ ಬಿರುಕು ಬಿಡಲು ಕಾರಣವೇನು ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಳೆದ ಭಾನುವಾರ ಇದೇ ರಸ್ತೆ ದಿಢೀರ್ ಕುಸಿದ ಪರಿಣಾಮ ಒಂದು ಕಾರು ಹಾಗೂ ಸರ್ಕಾರಿ ಬಸ್ ಜಖಂ ಗೊಂಡಿತ್ತು. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು. ಕ್ರೇನ್ ಹಾಗೂ ಟ್ರಕ್ ಗಳ ಸಹಾಯದಿಂದ ವಾಹನಗಳನ್ನು ಹೊರತೆಗೆಯಲಾಗಿತ್ತು. ಅಲ್ಲದೆ ಆ ಪ್ರದೇಶದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಲಾಗಿತ್ತು.