ರಾಜ್ಯಸಭಾ ಕಲಾಪದಲ್ಲಿ ಜಯಾ ಬಚ್ಚನ್
ನವದೆಹಲಿ: ಬಿಜೆಪಿ ಬೆಂಬಲಿತ ನಾಯಕನೊಬ್ಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರುಂಡ ಕಡಿದವರಿಗೆ ರೂ.11 ಲಕ್ಷ ಇನಾಮು ಘೋಷಣೆ ಮಾಡಿರುವುದಕ್ಕೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ರಾಜ್ಯಸಭಾ ಕಲಾಪದಲ್ಲಿ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಗೋರಕ್ಷಣೆಗೆ ಬದ್ಧವಾಗಿದೆ. ಆದರೆ, ಮಹಿಳೆಯರ ರಕ್ಷಣೆಗಲ್ಲ ಎಂದು ಹೇಳಿದ್ದಾರೆ.
ನೀವು ಗೋವನ್ನು ರಕ್ಷಿಸಬಲ್ಲರು. ಆದರೆ, ಮಹಿಳೆಯರನ್ನಲ್ಲ. ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ. ಮಹಿಳೆಯರ ವಿರುದ್ಧ ಹೀಗೆ ಮಾತನಾಡಲು ಹೇಗೆ ಸಾಧ್ಯ?...ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ನಿಜಕ್ಕೂ ಅಸುರಕ್ಷಿತರಾಗಿದ್ದೇವೆಂಬ ಭಾವನೆಗಳೂ ಮೂಡತೊಡಗಿವೆ. ಇಂತಹ ವಾತಾವಣವನ್ನು ನೀವು ಉತ್ತೇಜಿಸುತ್ತಿದ್ದೀರಾ? ಎಂದು ಮೋದಿ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಹನುಮಾನ್ ಜಯಂತಿ ಪ್ರಯುಕ್ತ ಬಿರ್ಭುಮ್ ಜಿಲ್ಲೆಯಲ್ಲಿ 'ಜೈ ಶ್ರೀ ರಾಮ್' ಘೋಷಣೆಯ ರ್ಯಾಲಿಯನ್ನು ಆಯೋಜಿಸಲಾಗಿತ್ತು. ರ್ಯಾಲಿಯನ್ನು ಚದುರಿಸುವ ಸಲುವಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿಯವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದ ಬಿಜೆವೈಎಂ ನಾಯಕ ಯೋಗೇಶ್ ವರ್ಶ್ನೆ ಅವರು, ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಜಯಾ ಬಚ್ಚನ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics