ನವದೆಹಲಿ: ಆನ್ ಲೈನ್ ವಿಷಯಗಳನ್ನು ನಿಷೇಧಿಸುವುದರಿಂದ ತಿಳಿದುಕೊಳ್ಳುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಇಂಟರ್ ನೆಟ್ ನಲ್ಲಿ ಜನನ ಪೂರ್ವ ಲಿಂಗ ನಿರ್ಣಯ ಜಾಹೀರಾತುಗಳು ಮತ್ತು ವಿಷಯಗಳನ್ನು ಪ್ರಸಾರ ಮಾಡುವುದಕ್ಕೆ ನಿಷೇಧ ಹೇರುವ ಸಂಬಂಧ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿ ಈ ರೀತಿ ಹೇಳಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ, ಎಲ್ಲಾ ಆನ್ ಲೈನ್ ವಿಷಯಗಳನ್ನು ನಿರ್ಬಂಧಿಸಿದರೆ ಜನರು ನಿಜವಾಗಿಯೂ ಒಂದು ವಿಷಯದ ಕುರಿತು ತಿಳಿದುಕೊಳ್ಳಬೇಕಾದ ಮಾಹಿತಿಯ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಜನರ ಮಾಹಿತಿ ತಿಳಿದುಕೊಳ್ಳುವ ಹಕ್ಕಾದ ಸಂವಿಧಾನ ಪರಿಚ್ಛೇದ 19(1)ನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಹೇಳಿದರು.
ಈ ಕುರಿತ ವಿಚಾರಣೆಯಲ್ಲಿ ನ್ಯಾಯಾಧೀಶರಿಗೆ ಸಹಾಯ ಮಾಡಿದ ಅಟೊರ್ನಿ ಜನರಲ್ ಮುಕುಲ್ ರೊಹಟ್ಗಿ, ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಒಂದು ವಿಚಾರವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದರು.
ಆನ್ ಲೈನ್ ನಲ್ಲಿ ವಿಷಯಗಳನ್ನು ನಿಯಂತ್ರಿಸುವುದು ಅಥವಾ ಉಸ್ತುವಾರಿ ನೋಡಿಕೊಳ್ಳುವುದು ಕಷ್ಟ. ಆದರೆ ಈ ಕುರಿತು ಜಾಹೀರಾತು ನೀಡಬಾರದೆನ್ನುವುದು ಇನ್ನೊಂದು ವಿಷಯ. ಕೋರ್ಟ್ ನಂತರ ಅಡ್ವೊಕೇಟ್ ಜನರಲ್ ಮತ್ತು ಅರ್ಜಿದಾರರ ವಕೀಲ ಸಂಜಯ್ ಪರೇಖ್ ಅವರು ಲಿಖಿತ ಹೇಳಿಕೆಯಲ್ಲಿ ಭ್ರೂಣಲಿಂಗ ಪತ್ತೆ ನಿಷೇಧ ಜಾಹೀರಾತು ಪೂರ್ವನಿರ್ಧರಿತ ಭ್ರೂಣಲಿಂಗ ಪತ್ತೆ ನಿಷೇಧ ತಾಂತ್ರಿಕ ಕಾಯ್ದೆಯಡಿ ಬರುತ್ತದೆಯೇ ಮತ್ತು ನಿಷೇಧ ಹಣ ಕೊಟ್ಟು ನೀಡುವ ಜಾಹೀರಾತುಗಳಿಗೆ ಅನ್ವಯವಾಗುತ್ತದೆಯೇ ಎಂದು ತಿಳಿಸುವಂತೆ ಹೇಳಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.