ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಡದ ನೆರೆ ರಾಷ್ಟ್ರ ಪಾಕಿಸ್ತಾನ ತಾಲಿಬಾನ್ ಹಾಗೂ ಭಯೋತ್ಪಾದನೆಯನ್ನು ನಡೆಸುತ್ತಿದ್ದು, ಪಾಕಿಸ್ತಾನವನ್ನು ವಿಭಜಿಸಲು ಇದು ಸರಿಯಾದ ಸಮಯವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಬುಧವಾರ ಹೇಳಿದ್ದಾರೆ.
ಕುಲ್'ಭೂಷಣ್ ಜಾದವ್ ಅವರಿಗೆ ಪಾಕಿಸ್ತಾನ ಗಲ್ಲುಶಿಕ್ಷೆ ವಿಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ತಮ್ಮ ದೇಶದಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಜನತೆ ನಾಗರೀಕರಾಗುತ್ತಾರೆಂದು ತಿಳಿದು ನಾವು ಪಾಕಿಸ್ತಾನ ರಚನೆಯಾಗಲಿ ಎಂದು 1947ರಲ್ಲಿ ಅವಕಾಶ ನೀಡಿದ್ದೆವು. ಆದರೆ, ಅವರು ನಾಗರೀಕರಾಗದೆ ಇರುವುದು ದುರಾದೃಷ್ಟಕರ ಸಂಗತಿ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವೆಂಬುದೇ ಇಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ರಾಷ್ಟ್ರ ತಾಲಿಬಾನ್ ಹಾಗೂ ಭಯೋತ್ಪಾದನೆಯನ್ನು ನಡೆಸುತ್ತಿದೆ. ಬಲೂಚಿಸ್ತಾನವನ್ನು ಸ್ವತಂತ್ರ್ಯ ರಾಷ್ಟ್ರವಾಗಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಪಾಕಿಸ್ತಾನವನ್ನು ವಿಭಜಿಸಲು ಇದು ಸರಿಯಾದ ಸಮಯವಾಗಿದೆ. ಪಾಕಿಸ್ತಾನ ಇಬ್ಬಾಗವಾಗುವಂತೆ ಮಾಡಿದ್ದೆವು. ಈಗ ಪಾಕಿಸ್ತಾನವನ್ನು ನಾಲ್ಕು ಭಾಗವಾಗುವಂತೆ ಮಾಡಬೇಕಿದೆ. ಈ ಕೆಲಸವನ್ನು ಬಲೂಚಿಸ್ತಾನದ ಮೂಲಕವೇ ಪ್ರಾರಂಭಿಸೋಣ ಎಂದು ತಿಳಿಸಿದ್ದಾರೆ.