ನವದೆಹಲಿ: ನೌಕಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ, ಹೇಗಿದ್ದಾರೆ ಎಂಬುದರ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ.
ಜಾಧವ್ ಬಗ್ಗೆ ಪಾಕಿಸ್ತಾನ ಭಾರತದ ಜೊತೆ ಸಂವಹನ ನಡೆಸಿಲ್ಲ , ಅವರು ಯಾವುದೇ ಸ್ಥಿತಿಯಲ್ಲಿದ್ದರೂ ಭಾರತದ ರಾಯಭಾರಿಗಳನ್ನು ಸಂಪರ್ಕಿಸಲು ಅವಕಾಶ ನೀಡಬೇಕಿತ್ತು. ಆದರೆ ಪಾಕಿಸ್ತಾನ ರಾಯಭಾರಿ ಸಂಪರ್ಕಿಸಲು ಕೂಡಾ ನಿರಾಕರಿಸಿದೆ ಎಂದು ವಿದೇಶಾಂಗ ವಕ್ತಾರ ಹೇಳಿದ್ದಾರೆ.
ಜಾಧವ್ ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವ ಸುಳಿವು ನಮಗೆ ಸಿಗುತ್ತಿಲ್ಲ. ನಾವು ಅವರನ್ನು ವಾಪಸ್ ಕರೆತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಜಾಧವ್ ವಿಷಯ ನಮಗೆ ಬಹಳ ಮುಖ್ಯವಾಗಿದ್ದು, ನಮ್ಮ ಹೈ ಕಮಿಷನ್ ಮುಖಾಂತರ ನಾವು ಪಾಕಿಸ್ತಾನದ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಕುಲಭೂಷಣ್ ಜಾಧವ್ ವಿಚಾರ ಎರಡು ರಾಷ್ಟ್ರಗಳ ನಡುವೆ ಮತ್ತೆ ಹೊಸದಾಗಿ ವಿವಾದವನ್ನು ಹುಟ್ಟಿ ಹಾಕಿದೆ. ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಎರಡು ರಾಷ್ಟ್ರಗಳ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದಂತಾಗುತ್ತದೆ.