ಚಂಡೀಗಢ: ಕುಲ್ ಭೂಷಣ್ ಜಾದವ್'ಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವ ಕುರಿತಂತೆ ಈಗಾಗಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದ್ದು, ಇದರ ನಡುವೆಯೇ ಕಳೆದ 33 ವರ್ಷಗಳಿಂದಲೂ ಭಾರತೀಯ ಪ್ರಜೆಯೊಬ್ಬ ಪಾಕಿಸ್ತಾನ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.
1984ರಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ದಾಟಿದ್ದ 7 ವರ್ಷದ ಬಾಲಕ ನಾನಕ್ ಸಿಂಗ್ ಎಂಬಾತನನ್ನು ಪಾಕಿಸ್ತಾನ ಸೇನೆ ಬಂಧನಕ್ಕೊಳಪಡಿಸಿತ್ತು. ಇದೀಗ ಆ ಬಾಲಕನಿಗೆ 40 ವರ್ಷ ವಯಸ್ಸಾಗಿದ್ದು, ಈಗಲೂ ಪಾಕಿಸ್ತಾನ ಜೈಲಿನಲ್ಲಿಯೇ ಸೆರೆವಾಸ ಅನುಭವಿಸುತ್ತಿದ್ದಾನೆ.
ರತನ್ ಸಿಂಗ್ ಎಂಬುವವರು ಪಾಕಿಸ್ತಾನ ನದಿ ಬಳಿ 4 ಎಕರೆ ಜಾಗವನ್ನು ಹೊಂದಿದ್ದರು. ಇವರಿಗೆ ಮೂವರು ಗಂಡು ಮಕ್ಕಳಿದ್ದು, 5 ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ಪಾಕಿಸ್ತಾನ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ನಾನಕ್ ಸಿಂಗ್ ಹಿರಿಯ ಮಗನಾಗಿದ್ದಾನೆ. 1984ರಲ್ಲಿ ಪಾಕಿಸ್ತಾನ ನದಿ ಬಳಿಯಿರುವ ಭೂ ಪ್ರದೇಶದ ಬಳಿ ಹೋಗಿದ್ದ ವೇಳೆ ಆಕಸ್ಮಿಕವಾಗಿ ನಾಯಕ್ ಸಿಂಗ್ ಗಡಿ ದಾಟಿದ್ದರು. ಈ ವೇಳೆ ಪಾಕಿಸ್ತಾನದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.
ಪ್ರಕರಣ ಸಂಬಂಧ ನಾನಕ್ ಸಿಂಗ್ ಸಹೋದರ ಜಗ್ತರ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಹೋದರ ನಾನಕ್ ಅವರು ಬಿಡುಗಡೆಯಾಗುತ್ತಾರೆಂಬ ನಂಬಿಕೆಯನ್ನೇ ನಾವು ಕಳೆದುಕೊಂಡಿದ್ದೇವೆ. 2002ರಲ್ಲಿ ನಾನಕ್ ಸಿಂಗ್ ಬದುಕಿದ್ದು, ಪಾಕಿಸ್ತಾನ ಜೈಲಿನಲ್ಲಿದ್ದಾನೆಂಬ ವಿಚಾರ ನಮಗೆ ತಿಳಿದಿತ್ತು. ಕಳೆದ 15 ವರ್ಷಗಳಿಂದಲೂ ಸಹೋದರನನ್ನು ಬಿಡುಗಡೆಗೊಳಿಸಲು ನನ್ನ ತಂದೆ ರತನ್ ಸಿಂಗ್ ಅವರು ಹೋರಾಟ ಮಾಡುತ್ತಲೇ ಇದ್ದಾರೆಂದು ಹೇಳಿದ್ದಾರೆ.
ರಾಮ್ದಾಸ್ ಪೊಲೀಸ್ ಠಾಣೆಯ ಪೊಲೀಸರೊಬ್ಬರು ಸಹೋದರ ಬದುಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಸಹೋದರ ನಾನಕ್ ಸಿಂಗ್ ಅವರು ಕಾಕರ್ ಸಿಂಗ್ ಎಂಬ ಹೆಸರಿನಲ್ಲಿ ಪಾಕಿಸ್ತಾನ ಜೈಲಿನಲ್ಲಿದ್ದಾನೆಂದು ಹೇಳಿದ್ದರು. ಹೆಸರು ಬದಲಿಸಲಾಗಿದೆ. ಆದರೆ, ಪೋಷಕರ ಹೆಸರು ಹಾಗೂ ವಿಳಾಸ ಮಾತ್ರ ಒಂದೇ ರೀತಿಯಿದೆ. ಸಹೋದರ ಹೆಸರನ್ನು ಯಾವ ಕಾರಣಕ್ಕೆ ಬದಲಿಸಿದ್ದಾರೆಂಬುದು ನಮಗೆ ಗೊತ್ತಿಲ್ಲ. ಪೊಲೀಸರು ಮಾಹಿತಿ ನೀಡುವವರೆಗೂ ಆತನ ಬದುಕಿಲ್ಲ ಎಂದೇ ನಾವು ತಿಳಿದಿದ್ದೆವು ಎಂದು ಜಗ್ತರ್ ಸಿಂಗ್ ತಿಳಿಸಿದ್ದಾರೆ.