ದೇಶ

ಉಗ್ರರು ನುಗ್ಗಿ ದಾಳಿ ಮಾಡುತ್ತಿದ್ದರೆ, ಗುಪ್ತಚರ ಇಲಾಖೆ ಏನು ಮಾಡುತ್ತಿದೆ?: ಸಂಸದೀಯ ಸಮಿತಿ ತರಾಟೆ

Srinivasamurthy VN

ನವದೆಹಲಿ: ಪಾಕ್​ ಪ್ರೇರಿತ ಉಗ್ರರು ದೇಶದೊಳಕ್ಕೆ ನುಸುಳಿ ಕುಕೃತ್ಯ ಎಸಗುತ್ತಿದ್ದರೆ ಕೇಂದ್ರ ಗುಪ್ತಚರ ಇಲಾಖೆ ಸಕಾಲಕ್ಕೆ ಮಾಹಿತಿ ನೀಡದೆ, ಏನು ಮಾಡುತ್ತಿದೆ? ಎಂದು ಸಂಸದೀಯ ಸಮಿತಿ ತರಾಟೆಗೆ ತೆಗೆದುಕೊಂಡಿದೆ.

ಪಠಾಣ್ ಕೋಟ್ ಮತ್ತು ಉರಿ ಉಗ್ರ ದಾಳಿ ಸೇರಿದಂತೆ ದೇಶದ ವಿವಿಧೆಡೆ ಸಂಭವಿಸಿದ ಉಗ್ರ ದಾಳಿ ಕುರಿತಂತೆ ಸಂಸತ್ ನಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿರುದ್ಧ ಸಂಸದೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು, ಗುಪ್ತಚರ  ವೈಫಲ್ಯ ಎದ್ದುಕಾಣುತ್ತಿದೆ. ಇದಕ್ಕೆ ಯಾವುದೇ ರೀತಿಯ ಸಮಜಾಯಿಷಿ ಬೇಡ. ಉಗ್ರರು ದೇಶದ ಗಡಿ ದಾಟಿ ದಾಳಿ ಮಾಡಿರುವುದು ಸ್ಪಷ್ಟವಾಗಿದೆ. ಇದು ಗುಪ್ತಚರ ಇಲಾಖೆಯಲ್ಲಿಲೋಷಪದೋಷಗಳನ್ನು ಎತ್ತಿತೋರಿಸುತ್ತದೆ ಎಂದು  ಸಂಸದೀಯ ಸಮಿತಿ ಹೇಳಿದೆ.

ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ನೇತೃತ್ವದ ಗೃಹ ಇಲಾಖೆಯ ಸಂಸದೀಯ ಸ್ಥಾಯೀ ಸಮಿತಿಯು ಈ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, "ಪಠಾಣ್ ಕೋಟ್ ವಾಯು ನೆಲೆಯ ಮೇಲೆ ಭಯೋತ್ಪಾದನಾ ದಾಳಿ ನಡೆದು  ವರ್ಷ ಕಳೆಯಿತು. ಆದರೆ ರಾಷ್ಟ್ರೀಯ ತನಿಖಾ ದಳ ಇನ್ನೂ ತನಿಖೆ ಪೂರ್ಣಗೊಳಿಸಿಲ್ಲ. ಅಷ್ಟೇ ಅಲ್ಲ ದಾಳಿಗೂ ಮುನ್ನ ಸಕಾಲದಲ್ಲಿ ಗುಪ್ತಚರ ಮಾಹಿತಿ ಒದಗಿಸಲು ಯಾಕೆ ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆಯೂ ವಿಶ್ಲೇಷಣೆ ನಡೆದಿಲ್ಲ  ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಿ, ಗಡಿಭಾಗದಲ್ಲಿ ಗುಪ್ತಚರ ವ್ಯವಸ್ಥೆ ವೈಫಲ್ಯಕ್ಕೆ ಕಾರಣವೇನೆಂದು ಅರಿಯುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಸೂಚಿಸಬೇಕು ಎಂದು ಸಮಿತಿಯು ಸಲಹೆ  ನೀಡಿದೆ.

SCROLL FOR NEXT