ಹುತಾತ್ಮ ಯೋಧರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಿಕರನ್ನು ಸನ್ಮಾನಿಸಿದ ಪ್ರಧಾನಿ
ಭುವನೇಶ್ವರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದವರ ಮಹತ್ವದ ಪಾತ್ರಗಳನ್ನು ತಿಳಿಸಲು ದೇಶದ 50 ಕಡೆಗಳಲ್ಲಿ ಸ್ಮರಣಾರ್ಥ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಒಡಿಶಾ ರಾಜಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮ ಯೋಧರ ಕುಟುಂಬದವರನ್ನು ಸನ್ಮಾನಿಸಿ ಮಾತನಾಡಿದ ಅವರು, 1817ರಲ್ಲಿ ಒಡಿಶಾದಲ್ಲಿ ಪೈಕಾ ಕ್ರಾಂತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೆಲವು ಕುಟುಂಬಗಳಿಗೆ, ವರ್ಷಗಳಿಗೆ ಮತ್ತು ಕೆಲವು ಘಟನೆಗಳಿಗೆ ಸೀಮಿತವಾಗಿರುವುದು ದುರದೃಷ್ಟಕರ. ಸ್ವಾತಂತ್ಯ ಹೋರಾಟವೆಂಬುದು ಹಲವು ವರ್ಷಗಳ ಕಾಲ ನಡೆದ ಸುದೀರ್ಘ ಚಳವಳಿಯಾಗಿದ್ದು, ಇಂದಿನ ಜನಾಂಗದವರು ಅದರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದರು.
ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದವರ ಪಾತ್ರ ಮುಖ್ಯವಾದದ್ದು. ಅವರ ಮಹತ್ವಪೂರ್ಣ ಕೊಡುಗೆಗಳನ್ನು ಸ್ಮರಿಸಲು ದೇಶದ 50 ಕಡೆಗಳಲ್ಲಿ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಬುಡಕಟ್ಟು ಜನಾಂಗದವರ ಕೊಡುಗೆಗಳನ್ನು ಈ ಜನಾಂಗದವರ ಮುಂದೆ ಪರಿಚಯಿಸಲು ಸರ್ಕಾರ ಇಚ್ಛಿಸುತ್ತದೆ. ಒಡಿಶಾದ ಜನರ ಕೊಡುಗೆ ಹೋರಾಟದಲ್ಲಿ ಮುಖ್ಯವಾಗಿದೆ ಎಂದರು.
ಜನರ ಜೀವನದಲ್ಲಿ ಕನಸುಗಳನ್ನು ಈಡೇರಿಸಲು ಇತಿಹಾಸ ಮುಖ್ಯ ಪಾತ್ರ ವಹಿಸುತ್ತದೆ.
ಇದೇ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಒಡಿಶಾದ ಯೋಧರನ್ನು ಸ್ಮರಿಸಲಾಯಿತು. ಅವರ ಕುಟುಂಬದವರನ್ನು ಮತ್ತು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಪ್ರಧಾನಿ ಸನ್ಮಾನಿಸಿದರು.
ಪೈಕಾ ಒಡಿಶಾದ ಸಾಂಪ್ರದಾಯಿಕ ಸೇನೆಯಾಗಿದ್ದು 1817ರಲ್ಲಿ ಖುರ್ದಾದ ಪೈಕಾ ಹಾಗೂ ರಾಜ್ಯದ ಇತರ ಭಾಗದ ಬುಡಕಟ್ಟು ಜನಾಂಗದವರು ಬ್ರಿಟಿಷರ ಆಡಳಿತ ವಿರುದ್ಧ ಹೋರಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics