ದೇಶ

ವಿದೇಶೀ ವಿನಿಮಯ ನೀತಿ ಉಲ್ಲಂಘನೆ: ಕಾರ್ತಿ ಚಿದಂಬರಂಗೆ ಇಡಿ ನೋಟಿಸ್!

Srinivasamurthy VN

ನವದೆಹಲಿ: 2ಜಿ ಹಗರಣ ಸಂಬಂಧ ಭಾರಿ ವಿವಾದಕ್ಕೀಡಾಗಿದ್ದ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ವಿದೇಶೀ ವಿನಿಮಯ ನೀತಿ ಉಲ್ಲಂಘನೆ ಮಾಡಿದ  ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.

ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (Foreign Exchange Management Act -FEMA)ಯಡಿಯಲ್ಲಿ ಕಾರ್ತಿ ಚಿದಂಬರಂ ಸುಮಾರು 45 ಕೋಟಿ ರು.ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಜಾರಿ  ನಿರ್ದೇಶನಾಲಯ ಕಾರ್ತಿ ಚಿದಂಬರಂಗೆ ಷೋಕಾಸ್ ನೋಟಿಸ್ ನೀಡಿದೆ.

ಇಂತಹುದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಚೆನ್ನೈ ಮೂಲದ ವಾಸನ್ ಹೆಲ್ತ್ ಕೇರ್ ಗೂ ನೋಟಿಸ್ ಜಾರಿ ಮಾಡಿದ್ದು, ಈ ಸಂಸ್ಥೆಯಿಂದ ಸುಮಾರು 2, 262 ಕೋಟಿ ರು. ಗಳ ವಿದೇಶೀ ವಿನಿಮಯ ಉಲ್ಲಂಘನೆಯಾಗಿದೆ ಎಂದು  ಆರೋಪಿಸಲಾಗಿದೆ. ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಹೇಳಿರುವಂತೆ ವಿದೇಶಿ ವಿನಿಮಯ ನೀತಿ ಉಲ್ಲಂಘನೆಯಾದ ಹಣದ ಪ್ರಮಾಣ ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ, ಒಂದೊಂದು ತನಿಖಾ  ಸಂಸ್ಥೆ ಒಂದೊಂದು ಅಂಕಿ ಅಂಶ ನೀಡುತ್ತಿದೆ ಎಂದು ಹೇಳಿದ್ದಾರೆ.

ಕಳೆದ 2 ವರ್ಷಗಳಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, 45 ಕೋಟಿ ಮೌಲ್ಯದ ವಾಸನ್ ಸಂಸ್ಥೆಯ ಷೇರುಗಳನ್ನು ವಿದೇಶಿ ಹೂಡಿಕೆದಾರರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕಾರ್ತಿ  ಚಿದಂಬರಂ ಮತ್ತು ವಾಸನ್ ಸಂಸ್ಥೆಗೆ ಇಡಿ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

SCROLL FOR NEXT